ರಾಜೀನಾಮೆ ನೀಡಿರುವ ಶಾಸಕರ ರಾಜಕೀಯ ಭವಿಷ್ಯ ಸಮಾಧಿಯಾಗುತ್ತದೆ-ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.23- ರಾಜೀನಾಮೆ ನೀಡಿರುವ 15 ಶಾಸಕರಿಗೆ ಬಿಜೆಪಿಯವರು ಮಂತ್ರಿ ಮಾಡುವ ಆಮಿಷವೊಡ್ಡಿ ನಿಮಗೆ ಟೋಪಿ ಹಾಕುತ್ತಾರೆ.ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ವಾಗ್ವಾದ ನಡೆಯಿತು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರ ರಾಜಕೀಯ ಭವಿಷ್ಯ ಸಮಾಧಿಯಾಗುತ್ತದೆ.ಅವರ ವಿರುದ್ಧ ವಿಪ್ ಉಲ್ಲಂಘನೆಯ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದಾಗ, ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಚಿವರಿಂದ ಸದನದ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ.ರಾಜೀನಾಮೆ ನೀಡಿರುವ ಶಾಸಕರಿಗೆ ಬೆದರಿಕೆ ಹಾಕುವ ತಂತ್ರ ಮಾಡಲಾಗುತ್ತಿದೆ ಎಂದಾಗ ಆಡಳಿತ ಪಕ್ಷದ ಶಾಸಕರು ಶೆಟ್ಟರ್ ವಿರುದ್ಧ ತಿರುಗಿ ಬಿದ್ದರು.

ಮಾತು ಮುಂದುವರೆಸಿದ ಶಿವಕುಮಾರ್, ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಶಾಸಕರು ಅತೃಪ್ತರಲ್ಲ, ಸಂತೃಪ್ತರು.ಅವರ ವಿರುದ್ಧ ನೀಡಿರುವ ವಿಪ್ ಉಲ್ಲಂಘನೆ ದೂರಿನನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ.ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಆಮಿಷ ವೊಡ್ಡಲಾಗಿದೆ.ಒಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ, ಮತ್ತೊಬ್ಬರಿಗೆ ನೀರಾವರಿ ಖಾತೆ ಹೀಗೆ ಒಂದೊಂದು ಆಸೆ, ಆಮಿಷವೊಡ್ಡಲಾಗಿದೆ ಎಂದಾಗ, ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರು ರಾಜೀನಾಮೆ ನೀಡಿರುವ ಶಾಸಕರ ದಾರಿ ತಪ್ಪಿಸಿ ಅವರ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದರು.

ಡಿಕೆಶಿ ಮಾತಿಗೆ ದನಿ ಗೂಡಿಸಿದ ಕೃಷ್ಣಬೈರೇಗೌಡ ಅವರು, ತಮಿಳುನಾಡಿನ ಸ್ಪೀಕರ್ ನೀಡಿರುವ ತೀರ್ಪು ಮತ್ತು ಷರತ್ ಯಾದವ್ ಅವರಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿ ವಿಪ್ ಅನ್ವಯವಾಗಲಿದ್ದು, ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂದು ಪ್ರತಿಪಾದಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾವು ಸಿದ್ದರಿರಲಿಲ್ಲ. ನಮ್ಮ ಕುಟುಂಬವೂ ಬೇಡ ಎಂದೇ ನಿರ್ಧಾರ ಮಾಡಿತ್ತು.ಆದರೆ, ರಾಜೀನಾಮೆ ನೀಡಿರುವ ಶಾಸಕರಾದ ಗೋಪಾಲಯ್ಯ, ಸೋಮಶೇಖರ್, ಬೈರತಿ ಬಸವರಾಜು ಅವರ ಒತ್ತಡಕ್ಕೆ ಮಣಿದಿ ಸ್ಪರ್ಧಿಸಬೇಕಾಯಿತು ಎಂದು ಕೃಷ್ಣಬೈರೇಗೌಡ ಹೇಳಿದರು.

ಈ ಮಧ್ಯೆ ಪ್ರವೇಶಿಸಿದ ಜಗದೀಶ್ ಶೆಟ್ಟರ್, ಒಂದೊಂದು ಕೇಸಿಗೂ ಒಂದೊಂದು ತೀರ್ಪು ಇರುತ್ತದೆ.ತಮಿಳುನಾಡಿನ ಕೇಸಿಗೂ ಈಗ ರಾಜೀನಾಮೆ ನೀಡಿರುವ ಕೇಸಿಗೂ ಸಂಬಂಧವಿಲ್ಲ ಎಂದರು.

ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸರ್ಕಾರದ ಪರ ವಕೀಲರು ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಯಾಚನೆ ನಿರ್ಣಯದ ಪ್ರಕ್ರಿಯೆ ಮುಗಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಕಾನೂನು ತಿಳಿದವರು.ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ರಾಜೀನಾಮೆ ನೀಡಿರುವ 15 ಮಂದಿ ಶಾಸಕರು ಸದನಕ್ಕೆ ಹಾಜರಾಗುವುದು ಕಡ್ಡಾಯವಲ್ಲ ಎಂದು ತೀರ್ಪು ನೀಡಿದೆ. ಅವರು ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿದ ನಂತರ ವಿಪ್ ನೀಡಿದರೆ ಅನ್ವಯವಾಗುವುದಿಲ್ಲ.ಅಂತಹ ವಿಪ್‍ಗೆ ಕವಡೆಕಾಸಿನ ಕಿಮ್ಮತ್ತು ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ವಿಪ್ ನೀಡುವ ಬಗ್ಗೆ ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಎತ್ತಿದ್ದ ಕ್ರಿಯಾಲೋಪದ ವಿಚಾರದಲ್ಲಿ ಸಭಾಧ್ಯಕ್ಷರೇ ತೀರ್ಪು ನೀಡಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ