ಬೆಂಗಳೂರು: ವಿಶ್ವಾಸಮತ ಯಾಚನೆ ಪ್ರಕ್ರಿಯೆ ಇವತ್ತೇ ಮುಕ್ತಾಯ ಆಗಬೇಕೆಂದು ಹಾತೊರೆಯುತ್ತಿರುವ ಬಿಜೆಪಿಯ ನಿರೀಕ್ಷೆ ಈಡೇರುವುದು ಅನುಮಾನಾಸ್ಪದವಾಗಿದೆ. ವಿಶ್ವಾಸಮತ ನಿಲುವಳಿಯ ಮೇಲಿನ ಚರ್ಚೆಯಲ್ಲಿ ಆಪರೇಷನ್ ಕಮಲದ ವಿಚಾರ ಪ್ರವೇಶವಾಗಿದೆ. ಚರ್ಚೆಯ ಬಹುತೇಕ ಸಮಯವನ್ನು ಆಪರೇಷನ್ ತಿಂದುಹಾಕಿತು. ಇದನ್ನು ಮೊದಲೇ ನಿರೀಕ್ಷಿಸಿದ್ದ ಬಿಜೆಪಿ ಸದನದ ಕಲಾಪದ ಆರಂಭದಲ್ಲೇ ಚರ್ಚೆಯ ಸಮಯ ಮೊಟಕುಗೊಳಿಸಲು ಮಾಡಿದ ಪ್ರಯತ್ನವೂ ವಿಫಲವಾಯಿತು.
ಶಾಸಕರ ಚರ್ಚೆಗೆ ಸಮಯಾವಧಿ ನಿಗದಿಗೊಳಿಸಬೇಕೆಂದು ಬಿಜೆಪಿ ಮಾಡಿಕೊಂಡ ಮನವಿಯನ್ನು ಸ್ಪೀಕರ್ ರಮೇಶ್ ಕುಮಾರ್ ನಯವಾಗಿ ತಳ್ಳಿಹಾಕಿದರು. ತಾನು ಇಂತಿಷ್ಟು ಸಮಯ ಎಂದು ನಿರ್ದಿಷ್ಟಪಡಿಸುವುದಿಲ್ಲ. ಸದಸ್ಯರು ತಾವಾಗೇ ಜವಾಬ್ದಾರಿ ಅರಿತು ಕಡಿಮೆ ಸಮಯದಲ್ಲಿ ಚರ್ಚೆ ನಡೆಸಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಹೇಳಿದರು. ಇದರೊಂದಿಗೆ ಬಿಜೆಪಿಯ ಚೊಚ್ಚಲ ಪ್ರಯತ್ನ ವಿಫಲವಾಯಿತು.
ಇದರ ಮಧ್ಯೆಯೇ, ಕಾಂಗ್ರೆಸ್ ಸದಸ್ಯ ಕೃಷ್ಣ ಭೈರೇಗೌಡ ಅವರು ಆಪರೇಷನ್ ಕಮಲದ ವಿಚಾರ ಪ್ರಸ್ತಾಪಿಸಿದರು. ಹಾಗೆಯೇ ಐಎಂಎ ಹಗರಣವನ್ನೂ ಎತ್ತಿದರು. ಮಾಧ್ಯಮಗಳಲ್ಲಿ ಬಂದ ವರದಿಗಳನ್ನ ಉಲ್ಲೇಖಿಸಿ ಆಪರೇಷನ್ ಕಮಲದ ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದರು.
ರಾಜೀನಾಮೆ ನೀಡಿದ ಶಾಸಕರು ತಾವು ಬಿಜೆಪಿ ಸೇರುತ್ತೇವೆ ಎಂದು ಮಾಧ್ಯಮಗಳೆದುರು ಹೇಳುತ್ತಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತೇವೆ. ಬಿಜೆಪಿಯವರು ಟಿಕೆಟ್ ಕೊಡುವ ಭರವಸೆ ಕೊಟ್ಟಿದ್ಧಾರೆಂದು ತಿಳಿಸುತ್ತಾರೆ. ಇದು ಆಪರೇಷನ್ ಕಮಲ ಅಲ್ಲವಾ? ಎಂದು ಕೃಷ್ಣ ಭೈರೇಗೌಡ ಅವರು ಹೇಳುತ್ತಾರೆ.
ಇದರ ಜೊತೆಗೆ ಕೈ ಸದಸ್ಯರು ಕೆಲ ತಿಂಗಳಿನಿಂದೀಚೆ ಸಾರ್ವನಿಕವಾಗಿ ಬಹಿರಂಗಗೊಂಡಿರುವ ಆಪರೇಷನ್ ಕಮಲದ್ದೆನ್ನಲಾದ ಆಡಿಯೋ, ವಿಡಿಯೋಗಳನ್ನೂ ಸದನದಲ್ಲಿ ಪ್ರಸ್ತಾಪಿಸಿದರು. ರಾಜ್ಯಪಾಲರು ಸದನದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆಪಾದಿಸಿದ್ದನ್ನೂ ಉಲ್ಲೇಖಿಸಿ ಇದರ ಚರ್ಚೆ ನಡೆಯಬೇಕಿರುವುದು ಉಚಿತ ಎಂದು ವಾದಿಸಿದರು.
ಶಾಸಕರಿಗೆ ಕೋಟಿಗಟ್ಟಲೆ ದುಡ್ಡು ಮತ್ತು ಮಂತ್ರಿಸ್ಥಾನದ ಆಮಿಷಗಳನ್ನ ಬಿಜೆಪಿ ಒಡ್ಡಿರುವುದು ಈ ಆಡಿಯೋಗಳಿಂದ ತಿಳಿದುಬರುತ್ತದೆ. ಇದು ಆಪರೇಷನ್ ಕಮಲ ಅಲ್ಲವಾ ಎಂದು ಕೈ ಸದಸ್ಯರು ಪ್ರಶ್ನಿಸುತ್ತಾರೆ.
ಇದಕ್ಕೆ ಮಾಧುಸ್ವಾಮಿ ಸೇರಿದಂತೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇಂಥವೆಲ್ಲಾ ಚರ್ಚೆಯನ್ನು ಇದೇ ಸದನದಲ್ಲಿ ಯಾಕೆ ಮಾಡುತ್ತೀರಿ? ಅದಕ್ಕೆಂದೇ ತನಿಖಾ ಸಂಸ್ಥೆಗಳಿವೆ, ಕಾನೂನುಗಳಿವೆ, ಕೋರ್ಟ್ ಇದೆ. ಇದಕ್ಕೆಲ್ಲಾ ಅವಕಾಶ ಕೊಡಬೇಡಿ ಎಂದು ಮಾಧುಸ್ವಾಮಿ ಮನವಿ ಮಾಡಿದರು. ಆದರೆ, ಬಿಜೆಪಿಯ ಮನವಿಯನ್ನು ಸ್ಪೀಕರ್ ರಮೇಶ್ ಕುಮಾರ್ ಮಾನ್ಯ ಮಾಡುವುದಿಲ್ಲ. ಶಾಸಕರ ಬಗ್ಗೆ ಆಪಾದನೆ ಬಂದಾಗ ಚರ್ಚೆ ಆಗಲೇಬೇಕಾಗುತ್ತದೆ ಎಂದು ಸ್ಪೀಕರ್ ಅಭಿಪ್ರಾಯಪಟ್ಟರು.
ಕೃಷ್ಣ ಬೈರೇಗೌಡರು ಐಎಂಎ ಹಗರಣವನ್ನು ಉಲ್ಲೇಖಿಸಿ ಒಂದಷ್ಟು ಹೊತ್ತು ಚರ್ಚೆ ಪ್ರಾರಂಭಿಸಿದರು. ಬಡವರ ದುಡ್ಡು ತಿಂದು ಹಾಕಿದ ಸಂಸ್ಥೆಯಿಂದ ಶಾಸಕರೊಬ್ಬರು ಹಣ ಪಡೆದುಕೊಂಡಿರುವುದು ಸಾರ್ವಜನಿಕಗೊಂಡಿದೆ ಎಂದು ರೋಷನ್ ಬೇಗ್ ವಿರುದ್ಧ ಪರೋಕ್ಷವಾಗಿ ಆರೋಪಿಸಿದರು. ಇದಕ್ಕೆ ಆಕ್ಷೇಪಿಸಿದ ಸಿಟಿ ರವಿ, “ಈ ಕಂಪನಿ ವಿರುದ್ಧ ಹಿಂದೆಯೂ ಕಂಪ್ಲೇಂಟ್ ಕೊಟ್ಟಿರುತ್ತಾರೆ. ಆದರೆ ಆ ಕಂಪನಿಗೆ ಕ್ಲೀನ್ ಚಿಟ್ ಕೊಟ್ಟಿರುತ್ತಾರೆ. ಇದಕ್ಕೆ ಯಾರು ಹೊಣೆ? ಬಡವರನ್ನು ಬೀದಿಗೆ ತಂದವರ ಜೊತೆ ಬಿರಿಯಾನಿ ತಿಂದವರನ್ನೂ ಬಹಿರಂಗಪಡಿಸಬೇಕು. ಆ ಪಾಪದ ದುಡ್ಡಲ್ಲಿ ಚುನಾಯಿತರಾಗಿ ಬಂದಿದ್ದರೆ ಅದಕ್ಕಿಂತ ಪಾಪ ಇನ್ನೇನಿಲ್ಲ. ಯಾವ ಪಾರ್ಟಿಗೆ ಎಷ್ಟು ದುಡ್ಡು ಕೊಟ್ಟಿದ್ಧಾರೆ ಎಂಬುದು ಗೊತ್ತಾಗಲಿ. ರಕ್ಷಣೆ ಮಾಡಬೇಕಿರುವುದು ಬೀದಿಗೆ ಬಂದ ಜನರನ್ನೇ ಹೊರತು ಜನರ ದುಡ್ಡು ತಿಂದವರನ್ನಲ್ಲ” ಎಂದು ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಕುಮಾರಸ್ವಾಮಿ, ಬಿಜೆಪಿ ಸದಸ್ಯರ ಬಿರಿಯಾನಿ ಆರೋಪಕ್ಕೆ ಸ್ಪಷ್ಟನೆ ನೀಡಿದರು. ರಂಜಾನ್ ಹಬ್ಬದ ಸಂದರ್ಭದಲ್ಲಿ ಇಫ್ತಾರ್ಗೆ ಕರೆದುಕೊಂಡು ಹೋಗಿದ್ದು ಆ ಶಾಸಕರು… ನಾನು ಮಾಂಸಾಹಾರ ಬಿಟ್ಟಿದ್ದೇನೆ. ಈ ಇಫ್ತಾರ್ನಲ್ಲಿ ನಾನು ಬಿರಿಯಾನಿ ತಿನ್ನಲಿಲ್ಲ. ಒಂದು ಖರ್ಜೂರ ಬಾಯಿಗೆ ಹಾಕಿಕೊಂಡಿದ್ದು ಮಾಧ್ಯಮಗಳಲ್ಲಿ ಬಂದಿದೆ ಅಷ್ಟೇ. ಹಾಗೆಯೇ, ಆ ಹಗರಣದ ತನಿಖೆ ನಡೆಸಲು ಎಸ್ಐಟಿಗೆ ಆದೇಶ ನೀಡಿದ್ದೇನೆ ಎಂದು ಕುಮಾರಸ್ವಾಮಿ ವಿವರಿಸಿದರು.
ಕೃಷ್ಣ ಭೈರೇಗೌಡರು ಇನ್ನೂ ಮುಂದುವರಿದು, ಬಿಜೆಪಿಯ ಹಿಂದಿನ ಆಪರೇಷನ್ ಕಮಲದ ವಿವರವನ್ನೂ ಬಿಚ್ಚಿಟ್ಟರು. ಜಗ್ಗೇಶ್, ವಿ. ಸೋಮಣ್ಣ, ನಾರಾಯಣಸ್ವಾಮಿ, ಉಮೇಶ್ ಕತ್ತಿ ಮೊದಲಾದವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು ಆಪರೇಷನ್ ಕಮಲ ಅಲ್ಲವಾ ಎಂದು ಪ್ರಶ್ನಿಸಿದರು. ಹಾಗೆಯೇ, ಎಲ್ಲಾ 15 ಶಾಸಕರು ರಾಜೀನಾಮೆ ನೀಡಿ ಒಂದೇ ಸ್ಥಳದಲ್ಲಿ ಇರುವುದು ಏನನ್ನು ಸೂಚಿಸುತ್ತದೆ? ಬಿಜೆಪಿಗೆ ಬಹುಮತ ಗಳಿಸಲು ಎಷ್ಟು ಸಂಖ್ಯೆ ಬೇಕಿದೆ ಎಂಬುದು ಯಾರಿಗೂ ಗೊತ್ತಿಲ್ಲವಾ? ಬಿಜೆಪಿಯೇ ಇದರ ಬೆನ್ನಿಗಿದೆ ಎಂದು ಅನಿಸೋದಿಲ್ಲವಾ? ಎಂದು ಕೃಷ್ಣಭೈರೇಗೌಡರು ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನು ಹಾಕಿದರು.
ಸಮಯ ವ್ಯರ್ಥವಾಗುತ್ತದೆಂದು ಬಿಜೆಪಿ ಶಾಸಕರು ಹತಾಶೆಯಲ್ಲಿ ಮೌನ ವಹಿಸದೇ ಬೇರೆ ದಾರಿ ಇರಲಿಲ್ಲ.