ಬೆಳಗಾವಿಯಲ್ಲಿ ಅಧಿವೇಶನ: ಹಲವು ನಾಯಕರಿಂದ ಒತ್ತಾಯ

ಹುಬ್ಬಳ್ಳಿ : ಈ ಸಲದ ಮುಂಗಾರು ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಸಬೇಕೆಂದು ಉತ್ತರ ಕರ್ನಾಟಕದ ಜನಪ್ರತಿನಿಗಳು ಬಲವಾಗಿ ಒತ್ತಾಯಿಸುತ್ತಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಒತ್ತಾಯದ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಈ ಕುರಿತು ಪತ್ರ ಬರೆದು ಬೆಳಗಾವಿಯಲ್ಲಿ ಅವೇಶನ ನಡೆಸಬೇಕಾದ ಅಗತ್ಯವನ್ನು ಮನಗಾಣಿಸಿದ್ದಾರೆ.

ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬೇಕೆಂಬ ದೇಶದಿಂದ ವರ್ಷದಲ್ಲಿ ಒಂದು ಅಧಿವೇಶನವನ್ನು ಈ ಭಾಗದಲ್ಲಿ ನಡೆಸುವ ಸಲುವಾಗಿ ಬೆಳಗಾವಿಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಸುವರ್ಣ ವಿಧಾನ ಸೌಧವನ್ನು ನಿರ್ಮಿಸಲಾಗಿದೆ. ಆದರೆ ಇಲ್ಲಿ ಕೊನೆಯದಾಗಿ 2018ಲ್ಲಿ ಅವೇಶನ ನಡೆದಿದ್ದು, ಬೃಹತ್ ಕಟ್ಟಡ ಬಹುತೇಕ ನಿರುಪಯೋಗಿಯಾಗಿದೆ. ಸರ್ಕಾರದ ಕೆಲವು ಇಲಾಖೆಗಳನ್ನು ಬೆಳಗಾವಿಗೆ ವರ್ಗಾಯಿಸುವ ಭರವಸೆಯೂ ಪೂರ್ಣವಾಗಿ ಈಡೇರಿಲ್ಲ ಎಂಬ ಅಸಮಾಧಾನ ಪಕ್ಷಾತೀತವಾಗಿ ಈ ಭಾಗದ ಮುಖಂಡರಿಗಿದೆ.

ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವು ನಾಯಕರು ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ ನಡೆಸುವುದಕ್ಕೆ ಸಹಮತ ಹೊಂದಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯದೆ ಮೂರು ವರ್ಷವಾಗಿದೆ ಎಂದು ಹೊರಟ್ಟಿಯವರು ಪತ್ರದಲ್ಲಿ ತಿಳಿಸಿದ್ದಾರೆ.

ಆವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿರುವ ಕವಟಗಿಮಠ ಬೆಳಗಾವಿಯಲ್ಲಿ ಕೋವಿಡ್ ಕುರಿತಾಗಿ ವಿಶೇಷ ಅವೇಶನ ನಡೆಸಬೇಕು. ಆರೋಗ್ಯ ವ್ಯವಸ್ಥೆಗೆ ಸಮಗ್ರ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಇಲ್ಲಿ ಚರ್ಚೆಗಳಾಗಬೇಕು ಹಾಗೂ ಕೊರೋನಾ ಸೋಂಕಿನ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸುವ ಕುರಿತಂತೆ ಕಾರ್ಯಸೂಚಿ ರಚನೆಯಾಗಬೇಕೆಂದು ಸಲಹೆ ನೀಡಿದ್ದಾರೆ.

ಆರೋಗ್ಯ ವ್ಯವಸ್ಥೆಗೆ ಅದರಲ್ಲೂ ಗ್ರಾಮೀಣ ಭಾಗದ ಆರೋಗ್ಯ ಸೇವೆಗೆ ಸಮಗ್ರ ಕಾಯಕಲ್ಪ ನೀಡಬೇಕಾಗಿರುವುದು ಇಂದಿನ ತುರ್ತು ಅಗತ್ಯ. ಕೊರೋನಾ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕುರಿತು ಚರ್ಚೆಗಳಾಗಬೇಕಿದೆ. ಸೋಂಕಿತರಿಗೆ ಸಕಾಲಕ್ಕೆ ಅತ್ಯುತ್ತಮ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಚರ್ಚಿಸಬೇಕಾಗಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ