ಬೆಂಗಳೂರು, ಜು.22- ಮಕ್ಕಳಾಗಲೆಂದು ಮಾತ್ರೆ ತೆಗೆದುಕೊಂಡಿದ್ದ ದಂಪತಿ ಪೈಕಿ ಪತಿ ಸಾವನ್ನಪ್ಪಿ, ಪತ್ನಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ನೆಲಮಂಗಲ ಟೌನ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅರಶಿಣಕುಂಟೆ ಗ್ರಾಮಾದ ನಿವಾಸಿ ಶಶಿಧರ್ ಮೃತಪಟ್ಟಿದ್ದು, ಇವರ ಪತ್ನಿ ಗಂಗಮ್ಮ ತೀವ್ರ ಅಸ್ವಸ್ಥರಾಗಿದ್ದಾರೆ.
ಶಶಿಧರ್ ಅರಶಿಣಕುಂಟೆ ಗ್ರಾಮದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.ದಂಪತಿಗೆ ಮದುವೆಯಾಗಿ 12 ವರ್ಷ ಕಳೆದಿದ್ದರೂ ಮಕ್ಕಳಾಗಲಿಲ್ಲ ಎಂಬ ಕೊರಗಿತ್ತು.
ಇದೇ ವೇಳೆ ಬಿಹಾರಿ ಮೂಲದವರು ಕಾರಿನಲ್ಲಿ ಜಾಹೀರಾತು ಹಾಕಿಕೊಂಡು ಮಕ್ಕಳಿಲ್ಲದವರಿಗೆ ಮಕ್ಕಳಾಗುವಂತೆ ನಮ್ಮಲ್ಲಿ ಔಷಧಿ ಲಭ್ಯವಿದ್ದು, ಈ ಔಷಧಿಗೆ 25ಸಾವಿರ ರೂ.ವೆಚ್ಚ ತಗುಲಲಿದೆ ಎಂದು ಹೇಳಿದ್ದಾರೆ.
ಇದನ್ನು ನಂಬಿದ ಶಶಿಧರ್ ಹಾಗೂ ಗಂಗಮ್ಮ ಎರಡು ಸಾವಿರ ಮುಂಗಡ ಹಣಕೊಟ್ಟು ಔಷಧಿ ಖರೀದಿಸಿದ್ದಾರೆ.ಔಷಧಿ ಫಲಿಸದರೆ ಉಳಿದ 23 ಸಾವಿರ ಹಣ ಕೊಡುವುದಾಗಿ ಹೇಳಿ ಜಾಹೀರಾತುದಾರರ ಮುಂದೆಯೇ ಇಬ್ಬರೂ ಔಷಧಿ (ಮಾತ್ರೆ) ಸೇವಿಸಿದ್ದಾರೆ.
ಮಾತ್ರೆ ತೆಗೆದುಕೊಂಡ 10 ನಿಮಿಷದಲ್ಲಿಯೇ ಇಬ್ಬರಿಗೂ ಬೇಧಿ ಶುರುವಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶಶಿಧರ್ ಸಾವನ್ನಪ್ಪಿದ್ದು, ಗಂಗಮ್ಮ ತೀವ್ರ ಅಸ್ವಸ್ಥಗೊಂಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ನೆಲಮಂಗಲ ಟೌನ್ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ತಾಲ್ಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಸಂಬಂಧ ನೆಲಮಂಗಲ ಟೌನ್ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಜಾಹೀರಾತುದಾರರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.