
ಬೆಂಗಳೂರು, ಜು.22- ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನದಿನಕ್ಕೆ ಹೊಸ ತಿರುವು ತೆಗೆದುಕೊಳ್ಳುತ್ತಿದೆ. ಅದೇ ವೇಳೆ ಬಿಜೆಪಿ ಕೇಂದ್ರ ರಾಜಕೀಯ ನಾಯಕರು ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಬಿಕ್ಕಟ್ಟಿನಿಂದ ತಮ್ಮದೇ ಅಂತರ ಕಾಯ್ದುಕೊಂಡಿದ್ದು ಯಾವುದೇ ತೀರ್ಮಾನ ತೆಗೆದುಕೊಳ್ಳಲ ರಾಜ್ಯ ಬಿಜೆಪಿ ನಾಯಕರಿಗೆ ಸ್ವತಂತ್ರ ಅವಕಾಶ ಕಲ್ಪಸಿದ್ದಾರೆ.
ಇದೇ ವೇಳೆ ಮೈತ್ರಿ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಪರ ನಿಲುವು ತಾಳಿದೆ ಎನ್ನಲಾಗುತ್ತಿದ್ದು, ಇದು ಕೇಂದ್ರ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತಿಗೆ ವಿಳಂಬ ಮಾಡುವ ಮೂಲಕ ಕಲಾಪದ ಸಮಯವನ್ನು ನುಂಗಿಹಾಕುತ್ತಿದೆ.ಆದರೆ ಅಂತಿಮವಾಗಿ ಸರ್ಕಾರ ಕುಸಿಯುತ್ತದೆ ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಹೇಳುತ್ತಾರೆ.
ರಾಷ್ಟ್ರಮಟ್ಟದ ಬಿಜೆಪಿ ವರಿಷ್ಟರು ಕರ್ನಾಟಕದ ವ್ಯವಹಾರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಟ್ಟಿದೆ. ಪಕ್ಷದ ಮುಖ್ಯಸ್ಥ ಅಮಿತ್ ಶಾ, ರಾಜ್ಯದ ಬೆಳವಣಿಗೆಗಳಿಂದ ದೂರವುಳಿದಿದ್ದಾರೆ.
ಅದಾಗ್ಯೂ ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ನಲ್ಲಿ ಇದೀಗ ರಾಷ್ಟ್ರೀಯ ನಾಯಕತ್ವದ ಗೊಂದಲವಿದ್ದು, ಇದು ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳುತ್ತಾರೆ.
ಇದರ ಫಲವಾಗಿ, ಉತ್ತಮ ರಾಜಕೀಯ ಅವಕಾಶಗಳಿಗಾಗಿ ದೇಶಾದ್ಯಂತ ಹಲವಾರು ಕಾಂಗ್ರೆಸ್ ನಾಯಕರು ಬಿಜೆಪಿ ಕದ ತಟ್ಟುತ್ತಿದ್ದಾರೆ.
ಲೋಕಸಭಾ ಚುನಾವಣಾ ತೀರ್ಪು ಕಾಂಗ್ರೆಸ್-ಜೆಡಿ (ಎಸ್) ಮೈತ್ರಿ ರಾಜಕೀಯವಾಗಿ ಹೊಂದುವುದಿಲ್ಲ ಎಂದು ನಿರೂಪಿಸಿದೆ.ಬಿಜೆಪಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ನಂತರ ಮೈತ್ರಿ ಪಾಳಯದಲ್ಲಿ ರಾಜಕೀಯ ಅಸ್ಥಿರತೆ ಸಹಜವಾಗಿತ್ತು.
ಏಕೈಕ ಅತಿದೊಡ್ಡ ಪಕ್ಷವಾಗಿರುವುದರಿಂದ, ಮೈತ್ರಿ ಸರ್ಕಾರವು ವಿಶ್ವಾಸಮತ ಕಳೆದುಕೊಂಡ ನಂತರ ಬಿಜೆಪಿ ಅಧಿಕಾರಕ್ಕೇರುವ ಸ್ವಾಭಾವಿಕ ಹಕ್ಕುದಾರ ಪಕ್ಷವಾಗಲಿದೆ.
ಕರ್ನಾಟಕ ಧಾನಸಭೆಯ ಅಧಿಕಾರಾವಧಿಯಲ್ಲಿ ನಾಲ್ಕು ವರ್ಷಗಳು ಉಳಿದಿರುವಾಗಲೇ ಬಂಡಾಯ ಶಾಸಕರಲ್ಲಿ ಹೆಚ್ಚಿನವರು ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸಾರ್ಹ ಸಾಧ್ಯತೆ ಹೊಂದಿದ್ದಾರೆ.ಇದು ರಾಜ್ಯಕ್ಕೆ ರಾಜಕೀಯ ಸ್ಥಿರತೆಯನ್ನು ಒದಗಿಸುತ್ತದೆ ಅವರು ಹೇಳಿದ್ದಾರೆ.