ಬೆಂಗಳೂರು, ಜು.21-ಸದನದಲ್ಲಿ ಹೇಳಿರುವಂತೆ ನಾಳೆ ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಹುಮತ ಸಾಬೀತುಪಡಿಸಲು ಸೂಚಿಸಬೇಕು.ಇಲ್ಲದಿದ್ದರೆ ಅವರು ವಚನಭ್ರಷ್ಟರಾಗುತ್ತಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಶುಕ್ರವಾರ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದಾಗ ಸ್ಪೀಕರ್ ಅವರೇ ಸೋಮವಾರ ವಿಶ್ವಾಸಮತಯಾಚನೆ ಪ್ರಸ್ತಾವನೆಯನ್ನು ಮತಕ್ಕೆ ಹಾಕುವುದಾಗಿ ಹೇಳಿದ್ದಾರೆ. ಹೀಗಾಗಿ ಅವರ ಬಗ್ಗೆ ನಮಗೆ ಗೌರವವಿದೆ.ಒಂದು ವೇಳೆ ಮಾತು ತಪ್ಪಿದರೆ ಸ್ಪೀಕರ್ ಕೂಡ ವಚನ ಭ್ರಷ್ಟರಾಗುತ್ತಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಸೇರಿದಂತೆ ಅನೇಕರು ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ.ಬಹುತೇಕ ನಾಳೆ ರಾಜಕೀಯ ಗೊಂದಲಗಳಿಗೆ ತೆರೆ ಬೀಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ದೋಸ್ತಿ ನಾಯಕರು ಅನಗತ್ಯವಾಗಿ ನಮ್ಮನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ.ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಹಾಗೂ ವೈಯಕ್ತಿಕ ತೇಜೋವಧೆ ಮಾಡಿದರೆ ಪ್ರಚೋಧನೆಗೊಂಡು ಸದನದಲ್ಲಿ ಕೋಲಾಹಲ ಸೃಷ್ಟಿಸಬಹುದೆಂಬ ಲೆಕ್ಕಾಚಾರ ಅವರದ್ದು.ನಾವು ಕೂಡ ಇಂತಹ ರಾಜಕಾರಣವನ್ನು ಸಾಕಷ್ಟು ನೋಡಿದ್ದೇವೆ ಎಂದರು.
ನಮ್ಮ ಮೇಲೆ ಎಷ್ಟೇ ಆರೋಪ ಮಾಡಿದರೂ ನಾವ್ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮೊದಲು ಸದನದಲ್ಲಿ ವಿಶ್ವಾಸ ಮತಯಾಚನೆಯಾಗಬೇಕು.ಬಳಿಕ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ನಾವು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದೇವೆ. ನಮ್ಮನ್ನು ಎಷ್ಟೇ ತೇಜೋವಧೆ ಮಾಡಿದರೂ ನಾವ್ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೈತಿಕತೆ ಇದ್ದರೆ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು.ಆದರೆ, ಯಾವ ಕಾರಣಕ್ಕಾಗಿ ಇದುವರೆಗೂ ಅಧಿಕಾರದಲ್ಲಿ ಮುಂದುವರೆದಿದ್ದಾರೋ ಗೊತ್ತಿಲ್ಲ. ಅತೃಪ್ತರೇ ಬರುತ್ತಾರೆ ಎಂಬ ವಿಶ್ವಾಸ ನಮಗಿಲ್ಲ. ನಾಳೆ ಸರ್ಕಾರ ಪತನವಾಗುವುದು ನೂರಕ್ಕೆ ನೂರರಷ್ಟು ಖಚಿತ ಎಂದು ರೇಣುಕಾಚಾರ್ಯ ಭವಿಷ್ಯ ನುಡಿದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇನ್ನು ಯಾವ ಯಾವ ಸರ್ಕಸ್ ನಡೆಸುತ್ತಾರೋ ಗೊತ್ತಿಲ್ಲ. ಈಗಾಗಲೇ ಅವರು ಬಹುಮತ ಕಳೆದುಕೊಂಡಿದ್ದಾರೆ.ಇನ್ನು ಯಾವುದಾದರು ಪವಾಡ ನಡೆಯಬಹುದೆಂಬ ನಿರೀಕ್ಷೆ ದೋಸ್ತಿ ನಾಯಕರಿಗಿದೆ.ಆದರೆ, ಅಂತಹ ಯಾವುದೇ ಪವಾಡವು ನಡೆಯುದಿಲ್ಲ ಎಂದು ಹೇಳಿದರು.
ನಿಮಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು ಇದುವರೆಗೂ ಯಾವ ಕಾರಣಕ್ಕಾಗಿ ಮುಂದುವರೆದಿದ್ದಾರೋ ಗೊತ್ತಿಲ್ಲ. ನಾಳೆ ಬಹುಮತ ಸಾಬೀತೂ ಆಗುವುದಿಲ್ಲ. ಪವಾಡವೂ ನಡೆಯುವುದಿಲ್ಲ. ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಪುನರುಚ್ಚರಿಸಿದರು.