ನಮಗೆ ಸ್ಪೀಕರ್ ಮೇಲೆ ನಂಬಿಕೆಯಿದೆ-ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜು.21- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಂಬಿಕೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸಬರಿಗೆ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಹದಿನೈದು ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬುದು ನನ್ನ ಆರೋಪ. ನಾಳೆಯೊಳಗೆ ಮುಖ್ಯಮಂತ್ರಿಗಳು ವಿಶ್ವಾಸಮತ ಸಾಬೀತುಪಡಿಸಬೇಕು. ಇಲ್ಲವೇ ಗೌರವದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಲಿ ಎಂದು ಒತ್ತಾಯಿಸಿದರು.
ಯಲಹಂಕ ಹೊರವಲಯದ ರೆಸಾರ್ಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆÉ ನೀವು ಶಾಸಕರು ರಾಜೀನಾಮೆ ನೀಡಿದಾಗಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ನೀವು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾಡಿದ ಅಗೌರವ ಎಂದು ಅಸಮಾಧಾನ ಹೊರ ಹಾಕಿದರು.

ಹದಿನೈದು ಶಾಸಕರು ನಿಮ್ಮ ಸರ್ಕಾರಕ್ಕೆ ಬೆಂಬಲ ಇಲ್ಲ ಎಂದು ವಿಧಾನಸಭೆ ಸ್ಪೀಕರ್‍ಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ರಾಜ್ಯಪಾಲರಿಗೂ ಪತ್ರಗಳನ್ನು ನೀಡಿದ್ದಾರೆ.ಇನ್ನು ಯಾವ ಕಾರಣಕ್ಕಾಗಿ ನೀವು ಅಧಿಕಾರದಲ್ಲಿ ಮುಂದುವರೆಯುತ್ತೀರಿ ಎಂದು ಪ್ರಶ್ನಿಸಿದರು.

ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಪ್ರಸ್ತಾವವನ್ನು ಮತಕ್ಕೆ ಹಾಕುವುದಾಗಿ ಸ್ಪೀಕರ್ ಹೇಳಿದ್ದಾರೆ.ಖುದ್ದು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಮತಕ್ಕೆ ಹಾಕೋಣ ಎಂದು ಹೇಳಿರುವುದರಿಂದ ನಾವೂ ಕೂಡ ಸಹನೆಯಿಂದ ಕಾಯುತ್ತಿದ್ದೇವೆ ಎಂದರು.
ನಮಗೆ ಈಗಲೂ ಸ್ಪೀಕರ್ ಮೇಲೆ ನಂಬಿಕೆ ಇದೆ.ಮುಖ್ಯಮಂತ್ರಿಯವರು ಗೌರವಯುತವಾಗಿ ರಾಜೀನಾಮೆ ನೀಡುತ್ತಾರೆ ಎಂದು ಭರವಸೆ ಇಟ್ಟುಕೊಂಡಿದ್ದೆವು.ಆದರೆ ಅಧಿಕಾರದಲ್ಲಿ ಇರುವಷ್ಟು ದಿನ ಅಧಿಕಾರಿಗಳ ವರ್ಗಾವಣೆ ಮಾಡಿಕೊಂಡು ಸಾಧ್ಯವಾದಷ್ಟೂ ದೋಚಿಕೊಂಡು ಹೋಗುವ ಹುನ್ನಾರ ದೋಸ್ತಿ ಪಕ್ಷಗಳ ನಾಯಕರ ಲೆಕ್ಕಾಚಾರವಾಗಿದೆ ಎಂದು ಆರೋಪಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಾರೊಬ್ಬರನ್ನು ಸದನಕ್ಕೆ ಬರುವಂತೆ ಒತ್ತಾಯ ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಚರ್ಚೆ ನೆಪದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಹೇಗಾದರು ಮಾಡಿ ಬಿಜೆಪಿಗೆ ಅಧಿಕಾರ ಸಿಗದಂತೆ ಷಡ್ಯಂತ್ರ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ತಮ್ಮ ಪಕ್ಷದ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ.ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ನಾವು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ.ಶಾಸಕ ಶ್ರೀಮಂತ ಪಾಟೀಲ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.ಆದರೆ, ಕೆಲವರು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ರಾಜ್ಯಪಾಲರು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ನಮಗೆ ಇಲ್ಲ. ಅವರು ರಾಜ್ಯದ ವಸ್ತು ಸ್ಥಿತಿಯನ್ನು ಆಧರಿಸಿ ಕೇಂದ್ರ ಗೃಹ ಇಲಾಖೆಗೆ ವರದಿ ನೀಡಿರಬಹುದು. ಅತಿ ಹೆಚ್ಚು ಶಾಸಕರನ್ನು ಹೊಂದಿರುವ ನಾವು ಸರ್ಕಾರ ರಚನೆ ಮಾಡುವುದು ಶತಸಿದ್ಧ ಎಂದು ಹೇಳಿದರು.
ಶಾಸಕರಿಗೆ ವಿಪ್ ಜಾರಿ ಮಾಡಿದರೂ ಪ್ರಯೋಜನವಿಲ್ಲ.ಅವರು ಹಿಂದಿರುಗಲಿ ಎಂದು ಉಭಯ ಪಕ್ಷಗಳ ಮುಖಂಡರು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ.ಈಗಾಗಲೇ ಅವರು ಬಹುದೂರ ಸಾಗಿರುವುದರಿಂದ ವಾಪಸ್ ಬರುವ ಸಾಧ್ಯತೆಗಳು ತೀರಾ ಕಡಿಮೆ ಎಂದರು.
ತುಮಕೂರಿನ ಡಿಸಿಸಿ ಬ್ಯಾಂಕ್ ಸೂಪರ್‍ಸೀಡ್ ಮಾಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮಾಜಿ ಶಾಸಕ ಕೆ.ಎನ್.ರಾಜಣ್ಣ ದೋಸ್ತಿ ಸರ್ಕಾರದ ವಿರುದ್ಧ ನೇರವಾಗಿ ಟೀಕೆ ಮಾಡುತ್ತಿದ್ದರು. ಹೀಗಾಗಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂತಹ ದುರುದ್ದೇಶದ ಕ್ರಮ ಕೈಗೊಂಡಿದೆ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ