ಇಂದು ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅಂತ್ಯ ಸಂಸ್ಕಾರ

ನವದೆಹಲಿ: ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದೆ

ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ 81 ವರ್ಷದ ಶೀಲಾ ದೀಕ್ಷಿತ್ ಸಾವನ್ನಪ್ಪಿದ್ದರು.  ಕಾಂಗ್ರೆಸ್​ನ ಹಿರಿಯ ನಾಯಕರು ಶೀಲಾ ದೀಕ್ಷಿತ್​ ಅವರ ಮೃತದೇಹವನ್ನು ದೆಹಲಿಯ ನಿಜಾಮುದ್ದೀನ್​ ನಗರದಲ್ಲಿರುವ ಅವರ ಮನೆಗೆ ಕೊಂಡೊಯ್ದಿದ್ದರು. ಅವರ ಸ್ವಗೃಹದಲ್ಲಿ ನಿನ್ನೆ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿತ್ತು.  ಪ್ರಧಾನಿ ನರೇಂದ್ರ  ಮೋದಿ, ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಲೋಕಸಭೆ ಸ್ಪೀಕರ್​ ಓಂ ಬಿರ್ಲಾ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಡಿಸಿಎಂ ಮನೀಶ್​ ಸಿಸೋಡಿಯಾ, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್​ ತಿವಾರಿ, ಸೇರಿದಂತೆ ಹಲವು ರಾಜಕಾರಣಿಗಳು, ಗಣ್ಯರು ಮತ್ತು ಆತ್ಮೀಯರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು.

ಇಂದು ಬೆಳಗ್ಗೆ ಮೃತದೇಹವನ್ನು ಕಾಂಗ್ರೆಸ್​ ಮುಖ್ಯ ಕಚೇರಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಬಳಿಕ ಮಧ್ಯಾಹ್ನ 2.30ಕ್ಕೆ ನಿಗಂ ಬೋಧ್​ ಘಾಟ್​ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಶೀಲಾ ದೀಕ್ಷಿತ್ ನಿಧನದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಎರಡು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ