ಮೈತ್ರಿ ಸರ್ಕಾರದ ಇಂದಿನ ಸ್ಥಿತಿಗೆ ಸಿಎಂ ಆಡಳಿತ ವೈಕರಿ ಕಾರಣ

ಬೆಂಗಳೂರು, ಜು.21-ಮೈತ್ರಿ ಸರ್ಕಾರ ಪತನದ ಅಂಚಿಗೆ ತಲುಪಿದ್ದು, ಅಳಿವು-ಉಳಿವಿನ ನಿರ್ಣಾಯಕ ಘಟ್ಟದ ಸಂದರ್ಭದಲ್ಲೂ ರಾಜೀನಾಮೆ ನೀಡಿರುವ ಶಾಸಕರು ಮನಸ್ಸನ್ನು ಬದಲಿಸಿ ಮರಳುತ್ತಿಲ್ಲವೇಕೆ?ಇಷ್ಟೊಂದು ಬಲವಾಗಿ ಸರ್ಕಾರದ ವಿರುದ್ಧ 15 ಮಂದಿ ಶಾಸಕರು ತೀವ್ರ ಅಸಮಾಧಾನಗೊಂಡಿರುವುದೇಕೆ? ಬಗೆಹರಿಯಲಾಗದ ಭಿನ್ನಾಭಿಪ್ರಾಯ ಏನಿರಬಹುದು ಎಂಬ ಹತ್ತು ಹಲವು ಪ್ರಶ್ನೆಗಳು ಜನರನ್ನು ಕಾಡತೊಡಗಿವೆ.
ಶಾಸಕರ ರಾಜೀನಾಮೆಗೆ ಬಹಿರಂಗವಾಗಿ ಹಲವಾರು ಕಾರಣಗಳನ್ನು ನೀಡಿದ್ದರೂ ಅದಕ್ಕಿಂತ ಹೆಚ್ಚಾಗಿ ಜನಾನುರಾಗಿಯಾಗಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನರ ಮತ್ತು ಶಾಸಕರ ಸ್ಪಂದನೆಗೆ ಮೊದಲಿನಂತೆ ಸಿಗದಿರುವುದು ಎಂಬ ವಿಚಾರ ಬಹು ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿ ಸುತ್ತಮುತ್ತ ಇದ್ದಂತಹ ಸಚಿವರು, ಶಾಸಕರು ಹಾಗೂ ಅಧಿಕಾರಿ ವರ್ಗ ಇದಕ್ಕೆ ಕಾರಣ ಎಂಬ ವಿಚಾರವೂ ಪ್ರಸ್ತಾಪವಾಗುತ್ತಿದೆ.ಬಿಜೆಪಿಯೊಂದಿಗಿನ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಾಮಾನ್ಯ ಜನರಿಗೂ ಸುಲಭವಾಗಿ ಸಿಗುತ್ತಿದ್ದರು.ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದರು.ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದ ಮೇಲೆ ಕುಮಾರಸ್ವಾಮಿಯವರ ಆಡಳಿತ ವೈಖರಿಯೇ ಸಂಪೂರ್ಣ ಬದಲಾಗಿ ಹೋಯಿತು.ಕುಮಾರಸ್ವಾಮಿಯವರ ಸುತ್ತ ಒಂದು ರೀತಿಯ ಸರ್ಪಗಾವಲನ್ನು ಹಾಕಿಕೊಳ್ಳಲಾಗಿದೆ.ಯಾರಿಗೂ ಮೊದಲಿನಂತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಮುಕ್ತ ಅವಕಾಶ ದೊರೆಯುತ್ತಿರಲಿಲ್ಲ.

ಖಾಸಗಿ ಹೊಟೇಲ್‍ನಲ್ಲಿ ಇದ್ದಂತಹ ಸಂದರ್ಭದಲ್ಲಿ ಜನಸಾಮಾನ್ಯರಿರಲಿ, ಶಾಸಕರಿಗೂ ಮುಖ್ಯಮಂತ್ರಿ ಭೇಟಿ ಅವಕಾಶ ಸಿಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಜೀನಾಮೆ ನೀಡಿರುವ ಶಾಸಕರೇ ಆರೋಪಿಸಿರುವಂತೆ ಶಾಸಕರನ್ನು ಮುಖ್ಯಮಂತ್ರಿ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ್ದರೆ ಸರ್ಕಾರ ಇಂತಹ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗಿರಲಿಲ್ಲ. ಅಲ್ಲದೆ, ದೈನಂದಿನ ಆಗುಹೋಗುಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಬಾಹ್ಯ ಮೂಲದಿಂದ ಮಾಹಿತಿಯೇ ದೊರೆಯದಂತಹ ಸನ್ನಿವೇಶ ನಿರ್ಮಾಣವಾಗಿತ್ತು.

ಜೊತೆಗೆ ಮುಖ್ಯಮಂತ್ರಿಯವರ ಅತಿಯಾದ ಆತ್ಮವಿಶ್ವಾಸ, ನಿರ್ಲಕ್ಷ್ಯ ಮನೋಭಾವ, ಕಾಂಗ್ರೆಸ್‍ನಲ್ಲಿರುವ ಆಂತರಿಕ ಅಸಮಾಧಾನ, ಅಪನಂಬಿಕೆಗಳು ಸೇರಿದಂತೆ ಮೈತ್ರಿ ಸರ್ಕಾರದಲ್ಲಿನ ಹಲವು ದೌರ್ಬಲ್ಯಗಳು ಕಾರಣವಾಗಿವೆ ಎಂದು ರಾಜಕೀಯವಲಯದಲ್ಲಿ ಚರ್ಚೆಯಾಗುತ್ತಿದೆ.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳೆರಡು ಈಗಿನ ಸರ್ಕಾರದ ಪರಿಸ್ಥಿತಿಗೆ ಬಿಜೆಪಿಗೆ ಕಡೆ ಬೊಟ್ಟು ಮಾಡಿ ತೋರಿಸುತ್ತಿವೆ. ಅಧಿಕಾರದ ದಾಹಕ್ಕಾಗಿ ಆಡಳಿತ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸಲಾಗಿದೆ ಎಂಬ ಆರೋಪವನ್ನು ಮಾಡುತ್ತಿವೆ. ಆದರೆ ಬಿಜೆಪಿ ಪರಿಸ್ಥಿತಿಯ ಲಾಭವನ್ನು ಸಮರ್ಥವಾಗಿ ಬಳಸಿಕೊಂಡು ಅಧಿಕಾರ ಪಡೆಯುವ ಯತ್ನ ಮಾಡುತ್ತಿದೆ.

ಮಿತ್ರ ಪಕ್ಷಗಳಲ್ಲಿನ ಪರಸ್ಪರ ಅಪನಂಬಿಕೆ, ಅಸಮಾಧಾನ, ನಿರ್ಲಕ್ಷ್ಯ ಮನೋಭಾವವೇ ಬಿಜೆಪಿಗೆ ಪ್ರಬಲ ಅಸ್ತ್ರವಾಗಿ ದೊರೆತಿದೆ.ಅದರ ಪೂರ್ಣ ಲಾಭವನ್ನು ಬಿಜೆಪಿ ಪಡೆಯಲು ಮುಂದಾಗಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಈಗ ತೋರುತ್ತಿರುವ ಒಗ್ಗಟ್ಟು, ಪರಸ್ಪರ ವಿಶ್ವಾಸ, ಸ್ನೇಹ ಸಂಬಂಧವನ್ನು ಕಳೆದ ಒಂದು ವರ್ಷದಿಂದಲೂ ನಡೆಸಿಕೊಂಡು ಬಂದಿದ್ದರೆ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿರಲಿಲ್ಲ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಶಾಸಕರು ರಾಜೀನಾಮೆ ನೀಡಿ ದೂರ ಸರಿದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಬುದ್ಧಿಬಂದಂತಾಗಿದೆ. ಪ್ರತಿಯೊಂದು ವಿಚಾರದಲ್ಲೂ ಪರಸ್ಪರ ವಿಮರ್ಶೆ ಮಾಡಿ ಒಗ್ಗಟ್ಟಿನ ನಿರ್ಧಾರವನ್ನು ಕೈಗೊಳ್ಳುತ್ತಿದ್ದಾರೆ. ಶಾಸಕರ ಮನವೊಲಿಕೆ, ಕಾನೂನು ಹೋರಾಟ, ವಿಧಾನಸಭೆ ಅಧಿವೇಶನದ ಕಲಾಪದಲ್ಲಿ ಪಾಲ್ಗೊಳ್ಳುವಿಕೆ ಸೇರಿದಂತೆ ಬಹುತೇಕ ವಿಚಾರಗಳಲ್ಲಿ ಉಭಯ ಪಕ್ಷಗಳು ಸಮಾನವಾದ ನಿಲುವನ್ನು ತಳೆದು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ.

ಇದೇ ರೀತಿಯ ಕಾರ್ಯವನ್ನು ಕಳೆದ ಒಂದು ವರ್ಷದ ಹಿಂದೆಯೇ ಅಂದರೆ ಸರ್ಕಾರ ರಚನೆಯಾದಾಗಿನಿಂದಲೂ ಮಾಡಿಕೊಂಡು ಬಂದಿದ್ದರೆ ಸರ್ಕಾರಕ್ಕೆ ಗಂಡಾಂತರ ಎದುರಾಗುತ್ತಿರಲಿಲ್ಲ. ಇದೇ ರೀತಿಯ ಒಗ್ಗಟ್ಟು ಕಾಯ್ದುಕೊಂಡು ಬಂದಿದ್ದರೆ, ಮೈತ್ರಿ ಸರ್ಕಾರದ ಬಗ್ಗೆ ಶಾಸಕರಲ್ಲಿ ಅಸಮಾಧಾನ ಉಂಟಾಗುತ್ತಿರಲಿಲ್ಲ. ಐದು ವರ್ಷಗಳ ಆಡಳಿತವನ್ನು ಯಶಸ್ವಿಯಾಗಿ ಸರ್ಕಾರ ಪೂರೈಸುತ್ತಿತ್ತು ಎಂಬ ವ್ಯಾಖ್ಯಾನಗಳು ರಾಜಕೀಯವಾಗಿ ವ್ಯಕ್ತವಾಗುತ್ತಿವೆ.
ಉಭಯ ಪಕ್ಷಗಳಲ್ಲಿನ ಭಿನ್ನಾಭಿಪ್ರಾಯ ಶಮನಗೊಳಿಸಿ ಯಶಸ್ವಿಯಾಗಿ ಆಡಳಿತ ನಡೆಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಇದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಉಭಯ ಪಕ್ಷಗಳ ನಡುವೆ ಹೊಂದಾಣಿಕೆ ಕಂಡು ಬರದೆ ಆಂತರಿಕವಾಗಿ ಅಸಮಾಧಾನ ಕಂಡು ಬಂದಿದ್ದು, ಮೈತ್ರಿ ಸರ್ಕಾರದ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಯಿತು. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಗುಂಪುಗಾರಿಕೆ ಸಮಸ್ಯೆ ಉಲ್ಬಣಕ್ಕೆ ಮತ್ತೊಂದು ಕಾರಣವಾಯಿತು.

ಕಾಂಗ್ರೆಸ್ ಶಾಸಕರ ಸಮಸ್ಯೆಯನ್ನು ಆಲಿಸಿ ಸ್ಪಂದಿಸುವ ಬದಲು ಅದು ಆ ಪಕ್ಷಕ್ಕೆ ಸೇರಿದ ವಿಚಾರವೆಂದು ಮುಖ್ಯಮಂತ್ರಿ ದೂರ ಸರಿದಿದ್ದು, ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳಲು ಎಡೆಮಾಡಿಕೊಟ್ಟಿತು.
ಶಾಸಕರಲ್ಲಿ ಅಸಮಾಧಾನ ಕಂಡುಬಂದಾಗಲೇ ಶಮನ ಮಾಡುವ ಪ್ರಯತ್ನ ಮಾಡಬೇಕಿತ್ತು.ಅಂದರೆ ಮೊಳಕೆಯಲ್ಲೇ ಚಿವುಟುವ ಪ್ರಯತ್ನ ಮಾಡಿದರೆ ಅಸಮಾಧಾನ ಹೆಮ್ಮರವಾಗಿ ಬೆಳೆಯುತ್ತಿರಲಿಲ್ಲ. ಈಗ ಇಷ್ಟೊಂದು ನೀರು ಕುಡಿಯಬೇಕಾದ ಪ್ರಮೇಯವೂ ಎದುರಾಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಅತಂತ್ರ ವಿಧಾನಸಭೆಯಿಂದಾಗಿ ಅನಿರೀಕ್ಷಿತವಾಗಿ ಜೆಡಿಎಸ್‍ಗೆ ದೊರೆತಿದ್ದ ಅಧಿಕಾರ ಹಾಗೂ ಮುಖ್ಯಮಂತ್ರಿ ಸ್ಥಾನ ಕೈತಪ್ಪುವ ಅಂಚಿಗೆ ಬಂದು ನಿಂತಿದೆ.ಇಷ್ಟಾದರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಖಾಡಕ್ಕಿಳಿದು ಶಾಸಕರ ಮನವೊಲಿಸುವ ಪ್ರಯತ್ನಕ್ಕೆ ಇಳಿದಿದ್ದರೂ ಬೆಟ್ಟದಷ್ಟಿರುವ ಸಮಸ್ಯೆ ಬೆಣ್ಣೆಯಂತೆ ಕರಗಿ ಹೋಗುತ್ತಿತ್ತು ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿವೆ.
ಒಟ್ಟಾರೆ ಈಗಿನ ಪರಿಸ್ಥಿತಿ ನೋಡಿದರೆ ಕೈಗೆ ಬಂದಂತಹ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಉಳಿಯುವುದು ಮೇಲ್ನೋಟಕ್ಕೆ ಸಾಧ್ಯವಾಗದ ಸ್ಥಿತಿಗೆ ತಲುಪಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ