ಎಲ್ಲರ ಚಿತ್ತ ಸುಪ್ರೀಂಕೋರ್ಟ್ ಮತ್ತು ರಾಜಭವನದ ಕಡೆ ಕೇಂದ್ರಿಕೃತ

ಬೆಂಗಳೂರು, ಜು.21-ಪತನದ ಅಂಚಿಗೆ ಬಂದುನಿಂತಿರುವ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ನಾಳೆಯೂ ಇತ್ಯರ್ಥವಾಗದಿರುವ ಶಂಕೆ ವ್ಯಕ್ತವಾಗಿದ್ದು, ಎಲ್ಲರೂ ರಾಜಭವನ ಮತ್ತು ಸುಪ್ರೀಂಕೋರ್ಟ್‍ನತ್ತ ಗಮನ ಕೇಂದ್ರಿಕರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪಾಲಿಗೆ ನಾಳೆ ನಿರ್ಣಾಯಕ ದಿನವೆಂದೇ ಭಾವಿಸಲಾಗಿತ್ತು. ಆದರೆ ಮೈತ್ರಿ ಪಕ್ಷಗಳು ಮತ್ತೆ ಸುಪ್ರೀಂಕೋರ್ಟ್‍ನ ಮೊರೆ ಹೋಗಿವೆ. ರಾಜ್ಯಪಾಲರು ಎರಡು ಬಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಪತ್ರ ಬರೆದು ವಿಶ್ವಾಸ ಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಿದ್ದರೂ ಅದು ಪಾಲನೆಯಾಗಿಲ್ಲ. ಹೀಗಾಗಿ ರಾಜ್ಯಪಾಲರು ನಾಳೆಯೂ ವಿಶ್ವಾಸಮತ ಸಾಬೀತುಪಡಿಸದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆ ಪ್ರಯತ್ನಗಳು ಮುಂದುವರೆದಿದ್ದರೂ ನಿರೀಕ್ಷಿತ ಫಲ ದೊರೆತಿಲ್ಲ. ಇದರಿಂದಾಗಿ ಮೈತ್ರಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವಿಧಾನಸಭೆಯಲ್ಲಿ ಮಂಡಿಸಿರುವ ವಿಶ್ವಾಸಮತಯಾಚನೆ ನಿರ್ಣಯದ ಮೇಲಿನ ಚರ್ಚೆ ಬಹುತೇಕ ನಾಳೆಯೇ ಪೂರ್ಣಗೊಳ್ಳಬಹುದೆಂಬ ವಿಚಾರವೂ ಪ್ರಸ್ತಾಪವಾಗುತ್ತಿದೆ.

ರಾಜೀನಾಮೆ ನೀಡಿರುವ ಶಾಸಕರು ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ ಎಂಬ ಸುಪ್ರೀಂಕೋರ್ಟ್‍ನ ಮಧ್ಯಂತರ ತೀರ್ಪಿನ ಬಗ್ಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮತ್ತೆ ಸುಪ್ರೀಂಕೋರ್ಟ್‍ನ ಮೊರೆ ಹೋಗಿವೆ. ಹೀಗಾಗಿ ಮೈತ್ರಿ ಸರ್ಕಾರದ ಅಳಿವು-ಉಳಿವಿನ ವಿಚಾರ ನಿರ್ಣಾಯಕ ಘಟ್ಟ ತಲುಪಲಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿಯವರು ಸುಪ್ರೀಂಕೋರ್ಟ್‍ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿ ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೋರಿದ್ದಾರೆ.ಇದಕ್ಕೆ ಸಂಬಂಧಿಸಿದ ವಿಚಾರಣೆ ನಾಳೆ ಸುಪ್ರೀಂಕೋರ್ಟ್‍ನಲ್ಲಿ ಬರುವ ಸಾಧ್ಯತೆ ಇದ್ದು, ಯಾವ ತೀರ್ಪು ನೀಡಬಹುದೆಂಬುದನ್ನು ಉಭಯ ಪಕ್ಷಗಳು ಕಾದು ನೋಡುತ್ತಿವೆ.

ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮೇಲಿನ ಚರ್ಚೆ ಮೂರನೇ ದಿನಕ್ಕೆ ಕಾಲಿಡಲಿದ್ದು, ಇಡೀ ದಿನ ಚರ್ಚೆ ನಡೆಯುವ ಸಾಧ್ಯತೆಗಳಿವೆ. ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮತಕ್ಕೆ ಹಾಕುವಂತೆ ಶುಕ್ರವಾರವೇ ಬಿಜೆಪಿ ಪಟ್ಟು ಹಿಡಿದಿತ್ತು. ಸೋಮವಾರ ವಿಶ್ವಾಸಮತ ಯಾಚನೆ ನಿರ್ಣಯವನ್ನು ಪೂರ್ಣಗೊಳಿಸಲು ಆಡಳಿತ ಪಕ್ಷಗಳು ಸಹಮತ ವ್ಯಕ್ತಪಡಿಸಿವೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲಿಗೆ ನಾಳಿನ ಅಧಿವೇಶನ ಹಾಗೂ ಸುಪ್ರೀಂಕೋರ್ಟ್ ನೀಡುವ ತೀರ್ಪು ನಿರ್ಣಾಯಕವಾಗಲಿದೆ.ಮೈತ್ರಿ ಸರ್ಕಾರ ಅಳಿವು-ಉಳಿವಿನ ನಿರ್ಧಾರವೂ ಇತ್ಯರ್ಥವಾಗುವ ಸಾಧ್ಯತೆಯೂ ಹೆಚ್ಚಾಗಿದೆ.ನಾಳೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನಾಧರಿಸಿ ವಿಶ್ವಾಸಮತ ಯಾಚನಾ ನಿರ್ಣಯದ ಮೇಲಿನ ಚರ್ಚೆಯನ್ನು ಮತ್ತಷ್ಟು ಮುಂದುವರೆಸಬೇಕೇ ಅಥವಾ ಪೂರ್ಣಗೊಳಿಸಬೇಕೇ ಎಂಬ ಬಗ್ಗೆ ದೋಸ್ತಿ ಪಕ್ಷಗಳು ನಿರ್ಧರಿಸಲಿವೆ.
ಉಭಯ ಪಕ್ಷಗಳ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮುಂದುವರೆಸಲಾಗಿದೆ. ನಾಳೆ ವಿಧಾನಸಭೆ ಕಲಾಪದಲ್ಲಿ ಯಾವ ಮಾರ್ಗಗಳನ್ನು ಅನುಸರಿಸಬೇಕೆಂಬ ಬಗ್ಗೆ ಇಂದು ಸಂಜೆ ಉಭಯ ಪಕ್ಷಗಳ ನಾಯಕರು ತಮ್ಮ ಶಾಸಕರಿಗೆ ಸಲಹೆ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ