ಬೆಂಗಳೂರು, ಜು.21-ಆಡಳಿತಾರೂಢ ಮೈತ್ರಿ ಪಕ್ಷಗಳಲ್ಲಿ ಸರ್ಕಾರ ಉಳಿಯಲಿದೆ ಎಂಬ ಆಶಾ ಭಾವನೆಯೂ ಕಮರಿ ಹೋಗಿದೆ.
ಸರ್ಕಾರ ಉಳಿಯುತ್ತದೆ.ಯಾವುದೇ ಕಾರಣಕ್ಕೂ ಶಾಸಕರು ಧೈರ್ಯ ಕಳೆದುಕೊಳ್ಳಬಾರದು, ಒಗ್ಗಟ್ಟಿನಿಂದ ಇರಬೇಕೆಂದು ನಾಯಕರು ಹಿತೋಪದೇಶ ಮಾಡುತ್ತಾ ಬಂದರೆ ಹೊರತು ಸರ್ಕಾರವನ್ನು ಉಳಿಸಿಕೊಳ್ಳುವಂತಹ ದಿಟ್ಟ ಪ್ರಯತ್ನವನ್ನು ಮಾಡಲಿಲ್ಲ ಎಂಬ ಅಸಮಾಧಾನ ಕೇಳಿ ಬರುತ್ತಿದೆ.
ಕಳೆದ ಎರಡು ವಾರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ನಡೆಸಿದ ಪ್ರಯತ್ನಗಳು ನಿರೀಕ್ಷಿತ ಫಲ ನೀಡಿಲ್ಲ. ರಾಜೀನಾಮೆ ನೀಡಿರುವ ಶಾಸಕರು ನಿಲುವನ್ನು ಬದಲಿಸಿ ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂಬ ವಿಶ್ವಾಸವೂ ಉಳಿದಿಲ್ಲ. ಹೀಗಾಗಿ ಆಡಳಿತ ಪಕ್ಷಗಳ ನಾಯಕರು ಅನುಸರಿಸಿದ ಮಾರ್ಗ ಯಶಸ್ಸಿನ ದಡ ತಲುಪುತ್ತಿಲ್ಲ. ಇದುವರೆಗೂ ಕಾಲಹರಣ ಮಾಡಿದಂತಾಯಿತೇ ಹೊರತು ಮೈತ್ರಿ ಸರ್ಕಾರ ಉಳಿಯುವಂತಹ ಲಕ್ಷಣಗಳು ಕಂಡು ಬರುತ್ತಿಲ್ಲ ಎಂಬ ಅಸಮಾಧಾನ ಆಡಳಿತ ಪಕ್ಷದಲ್ಲಿ ಕೇಳಿ ಬರುತ್ತಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿರುವ ಸಂದರ್ಭದಲ್ಲಿ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆ ಪ್ರಯತ್ನಗಳು ಮುಂದುವರೆದಿವೆ. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರು ಕಾಂಗ್ರೆಸ್-ಜೆಡಿಎಸ್ನ ಮನವೊಲಿಕೆ ಪ್ರಯತ್ನಕ್ಕೆ ಮಣಿಯುತ್ತಿಲ್ಲ. ಹೀಗಾಗಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ.
ನಾಳೆ ಮೈತ್ರಿ ಸರ್ಕಾರದ ಪಾಲಿಗೆ ನಿರ್ಣಾಯಕ ದಿನವಾಗಿದೆ.ಸುಪ್ರೀಂಕೋರ್ಟ್ನ ತೀರ್ಪು ಮಿತ್ರ ಪಕ್ಷಗಳಿಗೆ ಅನುಕೂಲಕರವಾಗಿದ್ದರೆ ಮಾತ್ರ ಸರ್ಕಾರ ಉಳಿಯುತ್ತದೆ.ಇಲ್ಲದಿದ್ದರೆ ಸರ್ಕಾರ ಪತನವಾಗುವುದೇ ನಿಶ್ಚಿತ ಎಂಬ ಭಾವನೆಯಲ್ಲಿ ಬಹುತೇಕರಿದ್ದಾರೆ.ನಾಳೆ ವಿಶ್ವಾಸಮತ ಸಾಬೀತಾಗದಿದ್ದರೆ ಮತ್ತೊಂದು ದಿನ ಮುಂದಕ್ಕೆ ಹೋಗಬಹುದೇ ಹೊರತು ಅಂತಿಮ ಫಲದಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ. ರಾಜೀನಾಮೆ ನೀಡಿರುವ ಶಾಸಕರು ಮರಳಿ ಬರುತ್ತಾರೆ ಎಂಬ ಬಲವಾದ ನಿರೀಕ್ಷೆಯೇ ಮುಳ್ಳಾಗಿ ಪರಿಣಮಿಸಿದಂತಿದೆ.ಪರ್ಯಾಯ ಮಾರ್ಗದತ್ತ ಹೆಚ್ಚು ಒತ್ತು ನೀಡದೆ ಮಿತ್ರ ಪಕ್ಷಗಳ ನಾಯಕರೇ ಸರ್ಕಾರ ಉಳಿಸಿಕೊಳ್ಳುವಲ್ಲಿ ಕೈ ಚೆಲ್ಲಿದ್ದಾರೆ ಎಂಬ ಅನುಮಾನ ಉಭಯ ಪಕ್ಷಗಳನ್ನು ಕಾಡತೊಡಗಿದೆ.