ಕಾಂಗ್ರೇಸ್ ನಾಯಕರ ತಂತ್ರಗಾರಿಕೆಗಳು ಯಶಸ್ವಿಯಾಗಲಿದೆಯಾ?

ಬೆಂಗಳೂರು, ಜು.21- ಅಳೆದೂ ತೂಗಿ ಕಾಂಗ್ರೆಸ್ ನಾಯಕರು ಮಾಡಿರುವ ತಂತ್ರಗಾರಿಕೆಗಳು ಯಶಸ್ವಿಯಾಗಲಿವೆಯೇ ? ಬೇಷರತ್ತಾಗಿ ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದ ಮುಖ್ಯಮಂತ್ರಿ ಸ್ಥಾನ ನಿರಾಯಾಸವಾಗಿ ಕಾಂಗ್ರೆಸ್ ಮಡಿಲಿಗೆ ಬೀಳಲಿದೆಯೇ ? ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ…?
ಈ ಎಲ್ಲಾ ಪ್ರಶ್ನೆಗಳಿಗೆ ಬಹುತೇಕ ಇನ್ನೆರಡುಮೂರು ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ಸಮ್ಮಿಶ್ರ ಸರ್ಕಾರ ಬಂದ ಆರಂಭದ ದಿನಗಳಿಂದಲೂ ಒಂದಲ್ಲಾ ಒಂದು ವಿಘ್ನಗಳು, ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಹೊಸದಾಗಿ ಬಜೆಟ್ ಮಂಡಿಸಲು ಮುಂದಾದರು.ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಿಪಡಿಸಿದ್ದರು.
ತಾವು ಹಿಂದೆ ಮಂಡಿಸಿದ ಬಜೆಟ್‍ನ ಕಾರ್ಯಕ್ರಮಗಳನ್ನೇ ಮುಂದುವರೆಸಬೇಕೆಂದು ಹಠವಿಡಿದರು.ಕೊನೆಗೆ ಮೈತ್ರಿ ಧರ್ಮದ ಪಾಲನೆಯಿಂದ ಕುಮಾರಸ್ವಾಮಿ ನಿಲುವನ್ನು ಒಪ್ಪಿಕೊಳ್ಳಬೇಕಾಯಿತು.

ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವೆ ಹಗ್ಗ ಜಗ್ಗಾಟ ನಡೆದಿತ್ತು.ಸುಮಾರು ಒಂದು ತಿಂಗಳು ನೇಮಕಾತಿಯ ಆದೇಶಕ್ಕೆ ಸಹಿಯೇ ಹಾಕಿರಲಿಲ್ಲ. ಜೆಡಿಎಸ್ ತನ್ನ ಪಾಲಿಗೆ ಬಂದ ಖಾತೆಯ ಅಧೀನಕ್ಕೊಳಪಡುವ ನಿಗಮ ಮಂಡಳಿಗಳಿಗೆ ಕಾಂಗ್ರೆಸಿಗರನ್ನು ನೇಮಿಸಲು ತಕರಾರು ತೆಗೆದಿತ್ತು.ಸಚಿವ ಸಂಪುಟ ವಿಸ್ತರಣೆಯಲ್ಲೂ ಇದೇ ರೀತಿಯ ಗೊಂದಲಗಳಿದ್ದವು.

ಹಾಗೂ ಹೀಗೂ ಎಲ್ಲವನ್ನೂ ಸರಿದೂಗಿಸಿಕೊಂಡು ಸರ್ಕಾರ ನಡೆಸಬೇಕು ಎನ್ನುವ ಹಂತದಲ್ಲಿ ಕಾಂಗ್ರೆಸ್‍ನಿಂದಲೇ ಸುಪಾರಿ ರಾಜಕಾರಣ ನಡೆದಿತ್ತು.
ಮೊದಲ ಹಂತದಲ್ಲಿ ಬೆಳಗಾವಿಯಿಂದಲೇ ಅಸಮಾಧಾನದ ಕಿಡಿ ಹಾರಿದ್ದು, ಸ್ಥಳೀಯ ಸಹಕಾರ ಬ್ಯಾಂಕ್‍ನ ಚುನಾವಣೆಯೊಂದನ್ನು ಮುಂದಿಟ್ಟುಕೊಂಡು ಬೆಳಗಾವಿಯ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಸಹೋದರ ಶಾಸಕ ಈಗಿನ ಸಚಿವ ಸತೀಶ್ ಜಾರಕಿಹೊಳಿ ಇಬ್ಬರೂ ಕಾಂಗ್ರೆಸ್‍ನ ಇನ್ನೊಬ್ಬ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಿದ್ದಾಜಿದ್ದಿಗೆ ಬಿದ್ದರು. ಈ ಹಂತದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಜಿಲ್ಲಾರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂತು.

ನಂತರದ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡರು, ಸತೀಶ್ ಜಾರಕಿಹೊಳಿ ಸಚಿವರಾದರು.ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀಹೆಬ್ಬಾಳ್ಕರ್ ನಡುವೆ ಆಂತರಿಕ ಸಮರ ಮುಂದುವರೆದಿತ್ತು.
ಸತೀಶ್ ಜಾರಕಿಹೊಳಿ ಜಿಲ್ಲಾ ಕಾಂಗ್ರೆಸ್ ನಾಯಕರ ಜತೆ ಹೊಂದಾಣಿಕೆ ಮಾಡಿಕೊಂಡು ಸಂಪುಟದಲ್ಲಿ ಮುಂದುವರೆದರೆ, ಮಾಜಿಯಾಗಿದ್ದ ರಮೇಶ್‍ಜಾರಕಿಹೊಳಿ ಸತತ ಒಂದು ವರ್ಷ ಕಾಲ ಕಾರ್ಯಾಚರಣೆ ನಡೆಸಿ ಆಪರೇಷನ್ ಕಮಲವನ್ನು ಈಗ ಒಂದು ಹಂತಕ್ಕೆ ತಂದು ನಿಲ್ಲಿಸಿದ್ದಾರೆ.
ಆ ಸಂದರ್ಭದಲ್ಲೇ ರಮೇಶ್ ಜಾರಕಿಹೊಳಿಯನ್ನು ಸಮಾಧಾನ ಪಡಿಸಿದ್ದರೆ ಈಗಿನ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ.

ಇದು ಒಂದು ಮಗ್ಗುಲಿನ ರಾಜಕಾರಣವಾದರೆ, ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ಮಾಡಿ ಅವರಿಗೆ ಯಾವುದೇ ಅಧಿಕಾರ ಚಲಾಯಿಸಲು ಬಿಡದೆ ನಿವೃತ್ತ ಐಎಎಸ್ ಅಧಿಕಾರಿಯನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸುವ ಮೂಲಕ ಅಸಮಾಧಾನಕ್ಕೆ ತುಪ್ಪ ಸುರಿಯಲಾಯಿತು.
ಎಸ್.ಟಿ.ಸೋಮಶೇಖರ್ 2-3 ಬಾರಿ ಬಹಿರಂಗ ಹೇಳಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಲಾಯಿತು.ಈ ಮಧ್ಯೆ ಕಾಂಗ್ರೆಸ್‍ನ ಕೆಲವು ಶಾಸಕರು ಈಗಲೂ ನಮಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿ ಮುಜುಗರ ಉಂಟು ಮಾಡಲಾರಂಭಿಸಿದರು.
ಕಾಂಗ್ರೆಸಿಗರ ಈ ನಡವಳಿಕೆಯಿಂದ ಬೇಸತ್ತು ಕುಮಾರಸ್ವಾಮಿ ಅವರು ಬಹಿರಂಗವಾಗಿ ಕಣ್ಣೀರು ಹಾಕಿ ನಾನು ವಿಷ ಉಂಡು ಆಡಳಿತ ನಡೆಸುತ್ತಿದ್ದೇನೆ ಎಂದು ನೋವು ತೋಡಿಕೊಂಡರು.

ಕಳೆದ ಆರು ತಿಂಗಳ ಹಿಂದೆ ಐದಾರು ಮಂದಿ ಇದೇ ರೀತಿ ಮುಂಬೈನ ರೆಸಾರ್ಟ್‍ನಲ್ಲಿ ಕುಳಿತು ಸರ್ಕಾರ ಪತನಗೊಳಿಸುವ ಪ್ರಯತ್ನ ನಡೆಸಿದ್ದರು.ಆಗಲೂ ದೋಸ್ತಿ ಪಕ್ಷಗಳ ನಾಯಕರು ಎಚ್ಚೆತ್ತುಕೊಂಡು ಪರಿಸ್ಥಿತಿ ಬಿಗಿಗೊಳಿಸಲಿಲ್ಲ.
ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಶಾಸಕರಾದ ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಒಂದೇ ದಿನ ರಾಜೀನಾಮೆ ನೀಡಿದರೂ ಕಾಂಗ್ರೆಸ್ ನಾಯಕರು ಉಡಾಫೆಯ ಧೋರಣೆ ಅನುಸರಿಸಿದರು.

ಜು.8ರಂದು ಮಧ್ಯಾಹ್ನ 12.30ಕ್ಕೆ ಎಂಟು ಮಂದಿ ಶಾಸಕರು ಮತ್ತು ಅವರ ಜತೆಗೆ ಬೆಂಗಳೂರಿನ ಮೂವರು ಶಾಸಕರು ಏಕಕಾಲಕ್ಕೆ ಬಂದು ರಾಜೀನಾಮೆ ನೀಡಲು ಮುಂದಾದರೂ ಸಹ ಕಾಂಗ್ರೆಸ್ ಮೈ ಮರೆಯಿತು.
ಆ ದಿನದ ಬೆಳವಣಿಗೆಯಲ್ಲಿ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಕಾಂಗ್ರೆಸ್‍ನ ಕೆಲವು ನಾಯಕರಿಗೆ ದೂರವಾಣಿ ಕರೆ ಮಾಡಲು ಪ್ರಯತ್ನಿಸಿದರು.ಕೆಲವರು ಕರೆ ಸ್ವೀಕರಿಸಲಿಲ್ಲ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಕರೆ ಸ್ವೀಕರಿಸಿ ಮಾತನಾಡಿದ್ದಾರೆ.ಶಾಸಕರ ರಾಜೀನಾಮೆ ಬಗ್ಗೆ ಅಹಮ್ಮದ್ ಪಟೇಲ್ ಆತಂಕ ವ್ಯಕ್ತಪಡಿಸಿದ್ದು.ಕೂಡಲೇ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.

ಆ ವೇಳೆಗಾಗಲೇ ಕನಕಪುರದ ಕ್ಷೇತ್ರ ಪ್ರವಾಸದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು ಅಲ್ಲಿಂದಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ನಾನು ದೂರದಲ್ಲಿದ್ದೇನೆ. ಇಲ್ಲಿಂದ ಬರುವುದು ತಡವಾಗುತ್ತದೆ.ನೀವು ಬೆಂಗಳೂರಿನಲ್ಲೇ ಇದ್ದೀರಿ.ತಕ್ಷಣವೇ ಸ್ಥಳಕ್ಕೆ ಹೋಗಿ ಶಾಸಕರನ್ನು ಸಮಾಧಾನಪಡಿಸಿ.ಇಲ್ಲವಾದರೆ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಮನವಿ ಮಾಡಿದ್ದರು.
ಅದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ ಅವರು, ಈಗಾಗಲೇ ಕಾಲ ಮಿಂಚಿ ಹೋಗಿದೆ.ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಪಾಡಿಗೆ ನೀವು ಬಂದು ಪ್ರಯತ್ನಿಸಿ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ.

ರಾಜ್ಯ ನಾಯಕರ ನಿರ್ಲಕ್ಷ್ಯವನ್ನು ಅರ್ಥ ಮಾಡಿಕೊಂಡ ಹೈಕಮಾಂಡ್ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಅವರ ಹಿಂದೆಯೇ ಹಿರಿಯ ನಾಯಕ ಗುಲಾಂ ನಭಿ ಆಜಾದ್ ಅವರನ್ನು ಬೆಂಗಳೂರಿಗೆ ಕಳುಹಿಸಿತ್ತು. ಅವರಿಬ್ಬರೂ ಬಂದು ಸಭೆಗಳ ಮೇಲೆ ಸಭೆ ನಡೆಸಿ ಗಂಭೀರ ಎಚ್ಚರಿಕೆ ನೀಡಿದ ಬಳಿಕ ಮೈ ಕೊಡವಿ ನಿಂತ ಕಾಂಗ್ರೆಸ್ ನಾಯಕರು ಆಗ ಅತೃಪ್ತರ ಮನವೊಲಿಸುವ ಪ್ರಯತ್ನ ನಡೆಸಿದರು.
ಆ ವೇಳೆಗಾಗಲೇ ಕಾಲಮಿಂಚಿತ್ತು. ಶಾಸಕರಾದ ರೋಷನ್‍ಬೇಗ್, ಡಾ.ಸುಧಾಕರ್, ಸಚಿವ ಎಂ.ಟಿ.ಬಿ.ನಾಗರಾಜ್ ಅವರು ಹಂತ ಹಂತವಾಗಿ ರಾಜೀನಾಮೆ ನೀಡಿದರು.

ಅನಂತರ ಕಾಂಗ್ರೆಸ್ ರೆಸಾರ್ಟ್ ರಾಜಕಾರಣದ ಮೊರೆಹೋಗಿದೆ.ಮೊದಲ ಹಂತದಲ್ಲಿ 8 ಮಂದಿ ರಾಜೀನಾಮೆ ಕೊಡಲು ಬಂದಾಗಲೇ ಎಚ್ಚೆತ್ತುಕೊಂಡು ರೆಸಾರ್ಟ್ ರಾಜಕಾರಣ ಆರಂಭಿಸಿದ್ದರೆ ಇನ್ನಷ್ಟು ಶಾಸಕರು ರಾಜೀನಾಮೆ ನೀಡುವುದನ್ನು ತಡೆಯಬಹುದಿತ್ತು.ಸರ್ಕಾರ ಉಳಿಸಿಕೊಳ್ಳಬಹುದಿತ್ತು.ಆದರೆ, ಕಾಂಗ್ರೆಸ್‍ನ ನಿರ್ಲಕ್ಷ್ಯದ ಹಿಂದೆ ಉದ್ದೇಶಿತ ಕಾರ್ಯಯೋಜನೆ ಇದ್ದಂತೆ ಇದೆ.
ಕೊನೆಗೂ ಅದು ಈಡೇರಲಿದೆಯೇ ? ಜೆಡಿಎಸ್ ನಾಯಕರು ಸಿಎಂ ಹುದ್ದೆ ಬಿಟ್ಟು ಕೊಡುತ್ತಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ