
ಬೆಂಗಳೂರು, ಜು.21- ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚಿಸುತ್ತಿರುವ ಹಿನ್ನೆಲೆಯಲ್ಲಿ ಹೇಗೆ ಗೆಲ್ಲಲು ಸಾಧ್ಯ ಎಂಬ ಸಮಗ್ರ ಮಾಹಿತಿ ನೀಡಬೇಕು. ಇಲ್ಲವೇ ಗೃಹ ಬಂಧನದಿಂದ ತಮ್ಮನ್ನು ಮುಕ್ತಿಗೊಳಿಸುವಂತೆ ಕಾಂಗ್ರೆಸ್ ಶಾಸಕರು ಒತ್ತಾಯಿಸಿರುವ ಪ್ರಸಂಗಗಳು ನಡೆದಿವೆ.
ಕಳೆದ ಒಂದು ವಾರದಿಂದ ಕಾಂಗ್ರೆಸ್ ಶಾಸಕರನ್ನು ಖಾಸಗಿ ಹೋಟೆಲ್ ಹಾಗೂ ರೆಸಾರ್ಟ್‍ನಲ್ಲಿ ಇರಿಸಲಾಗಿದೆ.ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕೂಡ ತಮ್ಮ ಶಾಸಕರನ್ನು ರೆಸಾರ್ಟ್‍ನಲ್ಲಿ ಇರಿಸಿವೆ.
ಜೆಡಿಎಸ್ ಮತ್ತು ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯಕ್ಕೆ ಒಂದು ಅರ್ಥವಿದೆ. ಬಿಜೆಪಿ ಸರ್ಕಾರ ರಚನೆ ಮಾಡುವ ಪ್ರಯತ್ನ ನಡೆಸಿದೆ.ಹಾಗಾಗಿ ಅವರ ಶಾಸಕರು ಬೇರೆ ಪಕ್ಷಕ್ಕೆ ಹೋಗದಂತೆ ಮುನ್ನೆಚ್ಚರಿಕೆವಹಿಸಲು ಈ ಕ್ರಮ ಕೈಗೊಂಡಿರುತ್ತಾರೆ.
ಜೆಡಿಎಸ್ ಮುಖ್ಯಮಂತ್ರಿಯಂತಹ ಪ್ರಮುಖ ಹುದ್ದೆ ಹೊಂದಿದ್ದು, ಅವರೂ ಕೂಡ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸೂಕ್ತ.ಆದರೆ, ಕಾಂಗ್ರೆಸ್ ಯಾವ ಪುರುಷಾರ್ಥಕ್ಕೆ ನಮ್ಮನ್ನು ಕೂಡಿಹಾಕಿಕೊಂಡಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈಗ ಉಳಿದಿರುವುದು 66 ಮಂದಿ ಮಾತ್ರ. ನಾವು ಏನೇ ಹರಸಾಹಸಪಟ್ಟರೂ ಸಮ್ಮಿಶ್ರ ಸರ್ಕಾರ ಉಳಿಯುವ ಖಾತ್ರಿ ಇಲ್ಲ. ನಾಯಕರು ಮಾತ್ರ ಸರ್ಕಾರ ಉಳಿಯಲಿದೆ ಎಂದು ಹೇಳುತ್ತಲೇ ಬಂದಿದ್ದಾರೆ. ಸರ್ಕಾರ ಹೇಗೆ ಉಳಿಯುತ್ತದೆ ಎಂದು ಬಿಡಿಸಿ ಹೇಳಿ. ನಾವು ಇಲ್ಲೇ ಉಳಿಯುತ್ತೇವೆ. ಅತ್ತ ಸರ್ಕಾರವೂ ಉಳಿಯುವುದಿಲ್ಲ. ಇತ್ತ ನಾವು ಕ್ಷೇತ್ರ ಅಥವಾ ಮನೆಗೂ ಹೋಗುವಂತಿಲ್ಲ.ಎಷ್ಟು ದಿನ ಇಲ್ಲಿ ಇರಲು ಸಾಧ್ಯ.ಜನ ಈಗಾಗಲೇ ಛೀಮಾರಿ ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾಳೆ ಎಲ್ಲದಕ್ಕೂ ಇತಿಶ್ರೀ ಹೇಳಿ.ಅನಗತ್ಯವಾಗಿ ಕಾಲಹರಣ ಮಾಡುವುದು ಬೇಡ.ಸರ್ಕಾರ ಉಳಿಯುವುದಾದರೆ ಉಳಿಯಲಿ.ಇಲ್ಲವಾದರೆ ವಿರೋಧ ಪಕ್ಷದ ಸ್ಥಾನದಲ್ಲೇ ಕೂರೋಣ. ಹೊರಗೆ ಹೋಗಲು ನಮಗೆ ಅವಕಾಶ ಮಾಡಿಕೊಡಿ ಎಂದು ಶಾಸಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಕಾಂಗ್ರೆಸ್‍ನಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಶಾಸಕರ ದಿಗ್ಬಂಧನಕ್ಕೆ ಜಟಾಪಟಿಗಳು ನಡೆಯುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಒಂದೆರಡು ದಿನಗಳವರೆಗೆ ಮಾತ್ರ ರೆಸಾರ್ಟ್‍ನಲ್ಲಿ ಇದ್ದು, ನಂತರ ಶಾಸಕರು ತಮ್ಮ ಮನೆಗಳತ್ತ ಮುಖ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಸಂಖ್ಯಾಬಲ ಕುಸಿದಿದ್ದು, ಸರ್ಕಾರ ಗುಟುಕು ಜೀವದಲ್ಲಿ ಬದುಕುತ್ತಿದೆ.ಇರುವ ಶಾಸಕರು ಶ್ರೀಮಂತ್ ಪಾಟೇಲ್ ರೀತಿಯಲ್ಲಿ ಕೈಕೊಟ್ಟರೆ ರಾಷ್ಟ್ರಮಟ್ಟದಲ್ಲಿ ಮುಖಭಂಗ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಶಾಸಕರನ್ನು ಹಿಡಿದಿಡಲು ಹರಸಾಹಸ ಪಡುತ್ತಿದ್ದಾರೆ.