ಬೆಂಗಳೂರು, ಜು.21-ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರದ ಅಳಿವು ಉಳಿವಿನ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಬಿಎಸ್ಪಿ ತಟಸ್ಥ ನಿಲುವು ತಳೆದಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್ಪಿ ತಟಸ್ಥ ನಿಲುವು ತಳೆದಿರುವುದರಿಂದ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸ ಮತ ಯಾಚನಾ ನಿರ್ಣಯದ ಮೇಲಿನ ಚರ್ಚೆ ಆರಂಭವಾಗಿದೆ. ಬಿಎಸ್ಪಿ ಶಾಸಕರಾದ ಮಾಜಿ ಸಚಿವ ಎನ್.ಮಹೇಶ್ ಅವರು ಕಳೆದೆರಡು ದಿನಗಳ ಅಧಿವೇಶನದಿಂದ ಹೊರಗೆ ಉಳಿದಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ನ ಯಾವ ನಾಯಕರೂ ಕೂಡ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಸಂಪರ್ಕಿಸಿ ಬೆಂಬಲ ಕೋರಿಲ್ಲ ಎನ್ನಲಾಗಿದೆ.
ಮಾಯಾವತಿ ಅವರೂ ಕೂಡ ಈ ಸಂದರ್ಭದಲ್ಲಿ ಮಹೇಶ್ ಅವರಿಗೆ ತಟಸ್ಥವಾಗಿರುವಂತೆ ಸೂಚನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಅವರು, ಖಾಸಗಿ ಕೆಲಸಗಳಿಂದಾಗಿ ತಮ್ಮ ಕ್ಷೇತ್ರದಲ್ಲಿಯೇ ಉಳಿದಿದ್ದ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಹೋಗಲು ಆಗಿಲ್ಲ.ತಮ್ಮ ನಾಯಕಿ ಮಾಯಾವತಿಯವರು ತಟಸ್ಥರಾಗಿರುವಂತೆ ಸೂಚಿಸಿದ್ದು, ಅದನ್ನು ಪಾಲನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. .
ಪಕ್ಷದ ವರಿಷ್ಠರು ನೀಡುವ ಸೂಚನೆ ಮೇರೆಗೆ ನಾಳಿನ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.