ಬೆಂಗಳೂರು, ಜು.20- ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಅತೃಪ್ತ ಶಾಸಕರು ಬಿಗಿ ಪಟ್ಟು ಹಿಡಿದಿರುವ ಬೆನ್ನಲ್ಲೇ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂದು ಮುಂದಾಗಿರುವ ದೋಸ್ತಿ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಸೋಮವಾರ ನಡೆಯಲಿರುವ ವಿಚಾರಣೆಯತ್ತ ಎಲ್ಲರ ಚಿತ್ತ ಹರಿದಿದೆ.
ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ವಿಳಂಬ ಕ್ರಮ ಆಕ್ಷೇಪಿಸಿ 15 ಜನ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಮಹತ್ವದ ಮಧ್ಯಂತರ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮುಂದೆ ಈಗ ಮತ್ತೆ ದೋಸ್ತಿ ಮುಖಂಡರು ಮೇಲ್ಮನವಿಗಳನ್ನು ಸಲ್ಲಿಸಿದ್ದು, ಸೋಮವಾರ ವಿಚಾರಣೆಗೆ ಬರುವುದರಿಂದ ರಾಜ್ಯ ರಾಜಕಾರಣದ ಭವಿಷ್ಯ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ನಿಂತಿದೆ.
ವಿಶ್ವಾಸ ಮತ ಯಾಚನೆ ನಿರ್ಣಯವನ್ನು ಸ್ವತಃ ಮುಖ್ಯಮಂತ್ರಿಯವರೇ ಮಂಡಿಸಿ ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಈ ಪ್ರಕ್ರಿಯೆ ಮಂಡನೆಗೆ ರಾಜ್ಯಪಾಲರು ಗಡುವು ವಿಧಿಸುವುದು ಸರಿಯಲ್ಲ. ಅವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲ್ಮನವಿ ಸಲ್ಲಿಸಿದ್ದಾರೆ.
ವಿಪ್ ನೀಡುವ ವಿಷಯದಲ್ಲಿ ಶಾಸಕಾಂಗ ಪಕ್ಷದ ನಾಯಕನಿಗಿರುವ ಅಧಿಕಾರವನ್ನು ಸುಪ್ರೀಂಕೋರ್ಟ್ ಮೊಟಕು ಮಾಡಿದೆ.ಈ ಬಗ್ಗೆ ವಿವರಣೆ ಕೋರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇತ್ತ ಸದನದಲ್ಲಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಡೆಯುತ್ತಿದೆ.ಚರ್ಚೆಯ ನೆಪದಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿದೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ರಾಜ್ಯಪಾಲರು ಸರ್ಕಾರಕ್ಕೆ 2 ಬಾರಿ ವಿಧಿಸಿದ್ದ ಗಡುವನ್ನು ಸರ್ಕಾರ ಪಾಲಿಸಿಲ್ಲ. ಆಡಳಿತ ಪಕ್ಷದ ಸದಸ್ಯರು ಚರ್ಚೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದೆ.ಈ ನಡುವೆ ದೋಸ್ತಿ ನಾಯಕರು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿ ಸೋಮವಾರ ವಿಚಾರಣೆಗೆ ಬರಲಿದೆ.ಸೋಮವಾರವೇ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.ಅತ್ತ ಮುಂಬೈನಲ್ಲಿರುವ ಅತೃಪ್ತರನ್ನು ಮನವೊಲಿಸುವ ಕಾರ್ಯ ಮುಂದುವರೆದಿದೆಯಾದರೂ ಅವರು ತಮ್ಮ ಪಟ್ಟು ಸಡಿಲಿಸಿಲ್ಲ ಮತ್ತು ಯಾರೊಂದಿಗೂ ಮಾತುಕತೆಗೆ ಸಿಕ್ಕಿಲ್ಲ.
ಸೋಮವಾರ ಸುಪ್ರೀಂಕೋರ್ಟ್ ಯಾವ ನಿರ್ಧಾರ ಕೈಗೊಳ್ಳಲಿದೆ.ಸದನದಲ್ಲಿ ಏನು ನಡೆಯಲಿದೆ ಎಂಬುದು ಮತ್ತಷ್ಟು ಕುತೂಹಲ ಕೆರಳಿಸಿದೆ.