ಬೆಂಗಳೂರು, ಜು.19-ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಇಂದು ಮಧ್ಯಾಹ್ನ 1.30ರೊಳಗೆ ವಿಧಾನಸಭೆಯಲ್ಲಿ ಸಾಬೀತು ಮಾಡಬೇಕೆಂದು ರಾಜ್ಯಪಾಲ ವಜೂಭಾಯಿ ವಾಲಾ ಅವರು ನಿರ್ದೇಶನ ನೀಡಿದ್ದರೂ ಚರ್ಚೆ ಮುಗಿದ ಬಳಿಕವೇ ಮತದಾನಕ್ಕೆ ಅವಕಾಶ ನೀಡಲಾಗುವುದೆಂದು ಸ್ಪೀಕರ್ ರಮೇಶ್ಕುಮಾರ್ ಪಟ್ಟು ಹಿಡಿದಿದ್ದಾರೆ.
ಈ ಬೆಳವಣಿಗೆಯಿಂದ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯುವ ಸಾಧ್ಯತೆಗಳು ಕಡಿಮೆಯಾಗಿವೆ.
ರಾಜ್ಯಪಾಲರು ನೀಡಿರುವ ನಿರ್ದೇಶನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸದನದಲ್ಲಿ ಸ್ಪಷ್ಟನೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಒತ್ತಾಯಿಸಿದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬಿಜೆಪಿಯವರು ಸವಾರಿ ಮಾಡುತ್ತಿದ್ದಾರೆ, ಗವರ್ನರ್ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಲು ಮುಂದಾದರು.
ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ, ಕೋಲಾಹಲದ ವಾತಾವರಣ ಉಂಟಾಗಿದ್ದರಿಂದ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಸದನ ಮುಂದೂಡುತ್ತಿದ್ದಂತೆ ಸ್ಪೀಕರ್ ರಮೇಶ್ಕುಮಾರ್ ಅವರು ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳಿದ್ದಾರೆ.ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಇನ್ನಷ್ಟು ಸಮಯಾವಕಾಶ ನೀಡುತ್ತಾರೆಯೋ ಅಥವಾ ಕಾನೂನು ಕ್ರಮ ಕೈಗೊಳ್ಳಲಿದ್ದಾರೆಯೇ ಎಂಬ ಯಕ್ಷಪ್ರಶ್ನೆ ಎದುರಾಗಿದೆ.
ಇದಕ್ಕೂ ಮುನ್ನ ಬೆಳಗ್ಗೆ ಚರ್ಚೆ ಪ್ರಾರಂಭಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನಗೆ ರಾಜ್ಯಪಾಲರು ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡಿದ್ದರು.ಆದರೆ ನಾನು ಇಂದು ಅನೇಕ ವಿಷಯಗಳನ್ನು ಚರ್ಚೆ ಮಾಡಬೇಕು.ರಾಜ್ಯಪಾಲರ ನಿರ್ದೇಶನದ ಬಗ್ಗೆ ನಾನು ಯಾವುದೇ ಟೀಕೆ ಮಾಡುವುದಿಲ್ಲ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಕೃಷ್ಣಭೆರೇಗೌಡ ಅವರು ಮುಖ್ಯಮಂತ್ರಿಯವರು ಸ್ವಯಂಪ್ರೇರಿತರಾಗಿ ಈ ಸದನದಲ್ಲಿ ನನ್ನ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸುತ್ತೇನೆ ಎಂದು ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದು ಸದನದ ಸ್ವತ್ತು.ರಾಜ್ಯಪಾಲರಾಗಲಿ, ಯಾರೇ ಆಗಲಿ ಸಂವಿಧಾನಕ್ಕಿಂತ ದೊಡ್ಡವರಲ್ಲ. ಮುಖ್ಯಮಂತ್ರಿಗಳೇ ಬಹುಮತ ಸಾಬೀತುಪಡಿಸುವುದಾಗಿ ಹೇಳಿರುವಾಗ ಇಂತಿಷ್ಟೇ ಸಮಯದಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ಸೂಚನೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು.
ರಾಜ್ಯಪಾಲರ ಕಾರ್ಯನಿರ್ವಹಣೆ ಕುರಿತಂತೆ ಈ ಹಿಂದೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳು ಅವರ ಕಾರ್ಯವ್ಯಾಪ್ತಿಯ ಬಗ್ಗೆ ಯೂ ಕೃಷ್ಣಭೆರೇಗೌಡ ಸದನದಲ್ಲಿ ಬೆಳಕು ಚೆಲ್ಲಿದರು.
ಈ ವೇಳೆ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಮುಖ್ಯಮಂತ್ರಿ ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡಲು ಅವಕಾಶವಿದೆ.
ನಿನ್ನೆ ರಾಜ್ಯಪಾಲರು ನೀಡಿರುವ ನಿರ್ದೇಶನಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದರು.ಈ ಹಂತದಲ್ಲಿ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವಂತೆ ಒತ್ತಾಯಿಸಿದರು.
ಆದರೆ ಸ್ಪೀಕರ್ ರಮೇಶ್ಕುಮಾರ್ ಮಾತ್ರ ನಾನು ಚರ್ಚೆ ನಡೆಯದೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ. ನಿಮಗೆ ಆತುರವಿರಬಹುದು.ಯಾರ ಒತ್ತಡಕ್ಕೂ ಮಣಿದು ನಾನು ಕೆಲಸ ಮಾಡುವುದಿಲ್ಲ.ಕಾನೂನು ಬಿಟ್ಟು ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೋಲಾಹಲ, ಗದ್ದಲ ಉಂಟಾಗಿ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.