ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವ ಹಕ್ಕು ರಾಜ್ಯಪಾಲರಿಗಿದೆ-ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ

ಬೆಂಗಳೂರು, ಜು.19- ಸರ್ಕಾರಕ್ಕೆ, ಸಂವಿಧಾನಕ್ಕೆ ನಿರ್ದೇಶನ ನೀಡುವ ಹಕ್ಕು ರಾಜ್ಯಪಾಲರಿಗಿದೆ. ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲರು ನೀಡಿರುವ ಸೂಚನೆಯನ್ನು ಮುಖ್ಯಮಂತ್ರಿಗಳು ಪಾಲಿಸಲೇಬೇಕು ಎಂದು ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ತಿಳಿಸಿದರು.

ಇಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ನೀಡಿರುವ ನಿರ್ದೇಶನ ಸಂಬಂಧ ಪ್ರತಿಕ್ರಿಯಿಸಿರುವ ಅವರು ಸರ್ಕಾರದ ಆಡಳಿತ ರಾಜ್ಯಪಾಲರ ಹೆಸರಲ್ಲಿ ನಡೆಯುತ್ತದೆ. ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವ ಹಕ್ಕು ರಾಜ್ಯಪಾಲರಿಗಿದೆ.ಅವರ ನಿರ್ದೇಶನವನ್ನು ಮುಖ್ಯಮಂತ್ರಿಗಳು ಪಾಲಿಸಲೇಬೇಕು.ಪಾಲಿಸದಿದ್ದರೆ ರಾಜ್ಯಪಾಲರ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದರು.
ವಿಶ್ವಾಸಮತ ಯಾಚನೆ ನಿರ್ಣಯವನ್ನು ನಿನ್ನೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿ ಮಾತನಾಡಿದರು.

ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರಿಯಾಲೋಪವೆತ್ತಿ ಸುಪ್ರೀಂಕೋರ್ಟ್ ವಿಚಾರವನ್ನು ಪ್ರಸ್ತಾಪಿಸಿ ವಿಪ್ ವಿಷಯ ಉಲ್ಲೇಖಿಸಿದ್ದರು.
ಸುದೀರ್ಘ ಚರ್ಚೆ ನಡೆದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು.ಎರಡು ಬಾರಿ ಸದನ ಮುಂದೂಡಿಕೆಯಾಗಿತ್ತು.ವಿಶ್ವಾಸಮತ ಯಾಚನೆಗೆ ಬಿಜೆಪಿ ಪಟ್ಟು ಹಿಡಿದಿತ್ತು.ವಿಪ್ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಗೊಂದಲವಿರುವುದರಿಂದ ಅದು ಬಗೆಹರಿಯುವವರೆಗೂ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಂದೂಡುವಂತೆ ಸಿದ್ದರಾಮಯ್ಯನವರು ಆಗ್ರಹಿಸಿದ್ದರು.

ಸ್ಪೀಕರ್ ರಮೇಶ್‍ಕುಮಾರ್ ಅಡ್ವೊಕೇಟ್ ಜನರಲ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದರು.ಬಿಜೆಪಿಯವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದ್ದರು.ನಂತರ ರಾಜ್ಯಪಾಲರು ಬಹುಮತ ಸಾಬೀತು ಪ್ರಕ್ರಿಯೆ ಇಂದೇ ಮುಗಿಸುವಂತೆ ಸ್ಪೀಕರ್‍ಗೆ ಸಂದೇಶ ರವಾನಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಚರ್ಚೆ ನಡೆಯಿತು.ನಂತರ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದವು. ಕಲಾಪವನ್ನು ಮುಂದೂಡಲಾಯಿತು. ಬಿಜೆಪಿ ಅಹೋರಾತ್ರಿ ಪ್ರತಿಭಟನೆಗೆ ಮುಂದಾಯಿತು.
ನಂತರ ನಡೆದ ಬೆಳವಣಿಗೆಯಲ್ಲಿ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ