ಬೆಂಗಳೂರು: ಅಂದು ಯಡಿಯೂರಪ್ಪ ವಿರುದ್ದ ಕುತಂತ್ರ ನಡೆಸಿದವರು ಇಂದು ಅದೇ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲು ಶಾಸಕರನ್ನು ಕಟ್ಟಿ ಹಾಕುತ್ತಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ರೇಣುಕಾಚಾರ್ಯ ಕಾಲೆಳೆದಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ರೇವಣ್ಣ ಕೈಯ್ಯಲ್ಲಿ ಹಿಡಿದುಕೊಳ್ಳುವ ನಿಂಬೆಹಣ್ಣಿನ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ನಾವು ದೇವರನ್ನು ನಂಬುವರು, ಹೀಗಿರುವಾಗ ರೇವಣ್ಣ ಪ್ರತಿದಿನ ದೇವಾಸ್ಥಾನಕ್ಕೆ ಹೋಗಿ ಬರುತ್ತಾರೆ, ಅಲ್ಲಿ ನಿಂಬೆಹಣ್ಣು ಕೊಡುತ್ತಾರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸುತ್ತಾರೆ. ಮಾಟ ಮಂತ್ರ ಮಾಡಿಸಿಕೊಂಡು ಬರುತ್ತಾರೆ ಎಂದು ಹೇಳುತ್ತಾರೆ.
ಮಾಟ ಮಂತ್ರದಿಂದ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ, ನಮ್ಮದು ಮಾಟ ಮಂತ್ಕದ ವಂಶವಲ್ಲ, ಇದು ದೇವರು ಕೊಟ್ಟ ಪದವಿ, ಅಧಿಕಾರ ಯಾವತ್ತೂ ಮುಖ್ಯವಲ್ಲ, ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ, ಇಂದು ನಾನು, ನಾಳೆ ನಿಮ್ಮದು ಇದೇ ಪರಿಸ್ಥಿತಿ, ಇತಿಹಾಸದಲ್ಲಿ ಇಂಥ ಘಟನೆ ಮರುಕಳಿಸಬಾರದು ಎಂದು ಹೇಳಿದ್ದಾರೆ.
ದೇಶದಲ್ಲಿ ಕೆಟ್ಟ ವಾತಾವರಣ ನಿರ್ಮಿಸಲು ಹೊರಟಿದ್ದೀರಿ, ನಿಮಗೂ ಮುಂದೆ ಕಾದಿದೆ ಮಾರಿಹಬ್ಬ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.