ನವದೆಹಲಿ,ಜು.19- ಕರ್ನಾಟಕದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಲೋಕಸಭೆಯಲ್ಲಿಂದು ಮತ್ತೆ ಪ್ರತಿಧ್ವನಿಸಿತು.
ಕಾಂಗ್ರೆಸ್ ಕಾರ್ಯಕರ್ತರು ಪ್ರಜಾಪ್ರಭುತ್ವ ಉಳಿಸಿ ನ್ಯಾಯ ದೊರಕಿಸಿಕೊಡಿ ಎಂಬ ಘೋಷಣೆ ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದೆ ಸ್ಥಳಕ್ಕೆ ಧಾವಿಸಿ ಧರಣಿ ನಡೆಸಿದರು.
ಡಿಎಂಕೆ ಸದಸ್ಯರೂ ಸಹ ತಮ್ಮ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಸಂಸದರೊಂದಿಗೆ ಪ್ರತಿಭಟನೆ ನಡೆಸಿದರು.
ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಪ್ರತಿಭಟನೆ ಮುಂದುವರೆದಿದ್ದರಿಂದ ಸಭಾಧ್ಯಕ್ಷ ಓಂ ಬಿರ್ಲಾ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲು ಯತ್ನಿಸಿದರು.
ಆದರೆ, ಕಾಂಗ್ರೆಸ್ ಸದಸ್ಯರು ಈ ವಿಷಯ ಕುರಿತು ಚರ್ಚೆಗೆ ಆಸ್ಪದ ನೀಡಬೇಕೆಂದು ಒತ್ತಾಯಿಸಿದರು.ಇದಕ್ಕೆ ಒಪ್ಪಿದ ಸಭಾಧ್ಯಕ್ಷರು ನಂತರ ಅವಕಾಶ ನೀಡುವುದಾಗಿ ತಿಳಿಸಿ ಧರಣಿ ಹಿಂತೆಗೆದುಕೊಳ್ಳುವಂತೆ ಮನವೊಲಿಸುವಲ್ಲಿ ಸಫಲರಾದರು.