ಬೆಂಗಳೂರು, ಜು.18-ರಾಜೀನಾಮೆ ನೀಡಿರುವ ಮೂವರು ಶಾಸಕರೂ ಸೇರಿದಂತೆ ಪಕ್ಷದ ಎಲ್ಲಾ ಶಾಸಕರಿಗೂ ಜೆಡಿಎಸ್ ವಿಪ್ ನೀಡಿದೆ. ರಾಜೀನಾಮೆ ನೀಡಿರುವ ಶಾಸಕರಾದ ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ಸೇರಿದಂತೆ ಎಲ್ಲಾ ಶಾಸಕರಿಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಪ್ ನೀಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ವಿಶ್ವಾಸಮತದ ನಿರ್ಣಯವನ್ನು ತಾವು ಮಂಡಿಸುತ್ತಿದ್ದು, ಪಕ್ಷದ ಎಲ್ಲಾ ಸದಸ್ಯರು ಕಡ್ಡಾಯವಾಗಿ ಹಾಜರಾಗುವಂತೆ ಮುಖ್ಯಮಂತ್ರಿ ವಿಪ್ನಲ್ಲಿ ತಿಳಿಸಿದ್ದಾರೆ.
ವಿಶ್ವಾಸಮತದ ಚರ್ಚೆ ಪ್ರಾರಂಭವಾದ ದಿನದಿಂದ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಸದನದಲ್ಲಿ ಹಾಜರಿರಬೇಕೆಂದು ಶಾಸಕರಿಗೆ ವಿಪ್ನಲ್ಲಿ ತಿಳಿಸಲಾಗಿದೆ.
ವಿಶ್ವಾಸಮತ ಮಂಡಿಸುವ ಸಂದರ್ಭದಲ್ಲಿ ಖುದ್ದು ಹಾಜರಿದ್ದು, ವಿಶ್ವಾಸ ಮತದ ಪರವಾಗಿ ಮತ ನೀಡಬೇಕು. ಒಂದು ವೇಳೆ ಗೈರು ಹಾಜರಾದಲ್ಲಿ ಅಥವಾ ಹಾಜರಾಗಿ ಮತ ಚಲಾಯಿಸದಿದ್ದಲ್ಲಿ ಅಥವಾ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ರೆಸಾರ್ಟ್ನಿಂದ ಒಟ್ಟಿಗೆ ಆಗಮಿಸಿದ ಶಾಸಕರು:
ಆಪರೇಷನ್ ಕಮಲದ ಭೀತಿಯಿಂದ ದೇವನಹಳ್ಳಿ ಬಳಿಯ ರೆಸಾರ್ಟ್ನಲ್ಲಿ ಕಳೆದ ಒಂದು ವಾರದಿಂದಲೂ ಬೀಡುಬಿಟ್ಟಿರುವ ಜೆಡಿಎಸ್ ಶಾಸಕರು ಇಂದು ಒಟ್ಟಾಗಿ ವಿಧಾನಸೌಧಕ್ಕೆ ಆಗಮಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಇರಬೇಕೆಂದು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಾಗಿತ್ತು. ಎಲ್ಲಾ ಶಾಸಕರು ಬಸ್ನಲ್ಲಿ ಒಟ್ಟಾಗಿ ವಿಧಾನಸೌಧಕ್ಕೆ ಆಗಮಿಸಿ ಅಧಿವೇಶನದಲ್ಲಿ ಪಾಲ್ಗೊಂಡರು.