ಬೆಂಗಳೂರು, ಜು.18- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾವವನ್ನು ಮುಂದೂಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಸದನವು ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತದೆ ಎಂಬ ನಿರ್ಣಯವನ್ನು ಮಂಡಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 15 ಶಾಸಕರ ವಿಚಾರ ಸುಪ್ರೀಂಕೋರ್ಟ್ನಲ್ಲಿದ್ದು, ಅದರ ಅಂತಿಮ ತೀರ್ಪು ಬರುವವರೆಗೂ ಈ ಪ್ರಸ್ತಾವವನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.
ರಾಜೀನಾಮೆ ನೀಡಿರುವ ಶಾಸಕರು ಸದನಕ್ಕೆ ಹಾಜರಾಗಲು ಕಡ್ಡಾಯವಿಲ್ಲ ಎಂಬ ಸುಪ್ರೀಂಕೋರ್ಟ್ನ ಮಧ್ಯಂತರ ಆದೇಶವಿದೆ. ಆದರೆ, ಸಂವಿಧಾನದ 10ನೇ ಷೆಡ್ಯೂಲ್ ಪ್ರಕಾರ ರಾಜಕೀಯ ಪಕ್ಷ, ರಾಜಕೀಯ ಶಾಸಕಾಂಗ ಪಕ್ಷದ ನಾಯಕರಿಗೆ ವಿಪ್ ನೀಡುವ ಅವಕಾಶವಿದೆ. ಅವರಿಗೂ ಕೂಡ ವಿಪ್ ಅನ್ವಯವಾಗಲಿದೆ. ಈ ಪರಿಸ್ಥಿತಿಯಲ್ಲಿ ವಿಶ್ವಾಸ ಮತದ ನಿರ್ಣಯದ ಚರ್ಚೆ ಮುಂದುವರೆಸುವುದು ಸರಿಯಲ್ಲ ಎಂದು ಹೇಳಿದರು.
ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ನಾವು ವಿಪ್ ಕೊಟ್ಟರು ಕಾಂಗ್ರೆಸ್-ಜೆಡಿಎಸ್ ಶಾಸಕರು ಸದನಕ್ಕೆ ಬರುವುದಿಲ್ಲ. ಅವರು ಬಾರದೆ ವಿಶ್ವಾಸಮತವನ್ನು ಮತಕ್ಕೆ ಹಾಕಿದಾಗ ಕಾಂಗ್ರೆಸ್ ಪಕ್ಷ ಮತ್ತು ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ನಷ್ಟ ಉಂಟಾಗುತ್ತದೆ. ಸಂವಿಧಾನ ಬದ್ಧ ಸರ್ಕಾರಕ್ಕೂ ದೊಡ್ಡ ನಷ್ಟ ಉಂಟಾಗುತ್ತದೆ ಎಂದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ಅಡ್ವೋಕೇಟ್ ಜನರಲ್ ಅವರೊಂದಿಗೆ ಮಾತನಾಡಬೇಕಾಗಿದೆ ಎಂದು ಹೇಳಿ ಸದನದ ಕಾರ್ಯಕಲಾಪವನ್ನು ಭೋಜನದ ವಿರಾಮಕ್ಕೆ ಮುಂದೂಡಿದರು.