ಬೆಂಗಳೂರು,ಜು.18- ವಿಶ್ವಾಸ ಮತಯಾಚನೆ ವೇಳೆಯೇ ಕಾಂಗ್ರೆಸ್ ಶಾಸಕ ಶ್ರೀಮಂತ್ಪಾಟೀಲ್ ಅವರು ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮುಂಬೈನ ದಾದರ್ ಈಸ್ಟ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ದೋಸ್ತಿ ಸರ್ಕಾರಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ನಿನ್ನೆ ರಾತ್ರಿ ಬೆಂಗಳೂರಿನ ದೇವನಹಳ್ಳಿ ಸಮೀಪದ ಪ್ರಕೃತಿ ರೆಸಾರ್ಟ್ನಿಂದ ಏಕಾಏಕಿ ಕಣ್ಮರೆಯಾಗಿದ್ದ ಶ್ರೀಮಂತ ಪಾಟೀಲ್ ದಿಢೀರ್ ಮುಂಬೈಗೆ ತೆರಳಿ ಅಲ್ಲಿ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಾಗಿರುವುದು ಅಚ್ಚರಿ ಮೂಡಿಸಿದೆ.
ರಾಮಲಿಂಗಾರೆಡ್ಡಿ ಅವರು ಇಂದು ವಿಧಾನ ಸಭೆಗೆ ಆಗಮಿಸಿ ಕಾಂಗ್ರೆಸ್ ಪಾಳಯದಲ್ಲಿ ಕುಳಿತುಕೊಂಡು ತಮ್ಮ ಬೆಂಬಲವನ್ನು ಪಕ್ಷಕ್ಕೆ ಮರಳಿ ವ್ಯಕ್ತಪಡಿಸಿದ್ದು, ಕಾಂಗ್ರೆಸ್ಗೆ ಒಂದು ಸಮಾಧಾನಕರ ಸಂಗತಿ.
ಆದರೆ ದಿಢೀರ್ ಕಣ್ಮರೆಯಾಗಿರುವ ಶ್ರೀಮಂತ ಪಾಟೀಲ್ ಆಸ್ಪತ್ರೆಗೆ ದಾಖಲಾಗಿರುವುದು ತಲೆಬಿಸಿಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ ಅವರನ್ನು ಹೇಗಾದರೂ ಕರೆತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಬಹುದಾದರೂ ಮುಂಬೈನಲ್ಲಿರುವ ಶ್ರೀಮಂತ ಪಾಟೀಲ್ ಅವರನ್ನು ಕರೆಸುವುದು ಸಾಧ್ಯವಾಗದಿರಬಹುದು.
ಇಂದು ಬೆಳಗ್ಗೆ ಶ್ರೀಮಂತ ಪಾಟೀಲ್ ಆಸ್ಪತ್ರೆಗೆ ದಾಖಲಾಗಿರುವ ಚಿತ್ರಗಳು ಬಿಡುಗಡೆಯಾಗಿದ್ದು, ಸಹಜವಾಗಿ ಇದು ಮೈತ್ರಿ ಸರ್ಕಾರದಲ್ಲಿ ಒಂದಿಷ್ಟು ಆತಂಕವನ್ನುಂಟು ಮಾಡಿದೆ.
ಅತೃಪ್ತ ಶಾಸಕರ ರಾಜಿನಾಮೆ ಪ್ರಹಸನ ಮತ್ತು ರಾಜಕೀಯ ಮುಖಂಡರ ರೆಸಾರ್ಟ್ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಾತ್ರೋ ರಾತ್ರಿ ನಾಪತ್ತೆಯಾಗುವ ಮೂಲಕ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದ್ದ ಶಾಸಕ ಶ್ರೀಮಂತ್ ಪಾಟೀಲ್ ಇದೀಗ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ.
ನಿನ್ನೆ ಕಾಂಗ್ರೆಸ್ ಶಾಸಕರೊಂದಿಗೆ ಬೆಂಗಳೂರಿನ ಪ್ರಕೃತಿ ರೆಸಾರ್ಟ್ನಲ್ಲಿ ತಂಗಿದ್ದ ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರಾತ್ರೋರಾತ್ರಿ ರೆಸಾರ್ಟ್ನಿಂದ ನಾಪತ್ತೆಯಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಶ್ರೀಮಂತ ಪಾಟೀಲ್ ಹಾಗೂ ಅವರ ಪಿಎಗಳ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು.
ಆದರೆ ಇದೀಗ ಶ್ರೀಮಂತ್ ಪಾಟೀಲ್ ಪತ್ತೆಯಾಗಿದ್ದು, ಅದೂ ಕೂಡ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ. ಹೌದು ನಿನ್ನೆ ಬೆಂಗಳೂರಿನ ಪ್ರಕೃತಿ ರೆಸಾರ್ಟ್ ನಲ್ಲಿ ನಾಪತ್ತೆಯಾಗಿದ್ದ ಶಾಸಕರು ಬೆಳಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಶ್ರೀಮಂತ್ ಪಾಟೀಲ್ ಅವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಇದೇ ಕಾರಣಕ್ಕೆ ಅವರು ಮುಂಬೈನ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಆದರೆ ಬೆಂಗಳೂರಿನಲ್ಲಿ ಎದೆನೋವು ಕಾಣಿಸಿಕೊಂಡರೆ ಮುಂಬೈಗೆ ತೆರಳಿ ಚಿಕಿಕ್ಸೆ ಪಡೆಯುವ ಅಗತ್ಯವೇನಿತ್ತು, ಬೆಂಗಳೂರಿನಲ್ಲಿ ಎದೆನೋವಿಗೆ ಸೂಕ್ತ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆಗಳಿರಲಿಲ್ಲವೇ ಎಂಬ ಪ್ರಶ್ನೆ ಕೂಡ ಇದೀಗ ಉದ್ಘವವಾಗಿದೆ. ಅಂತೆಯೇ ಎದೆ ನೋವು ನೆಪದಲ್ಲಿ ಮುಂಬೈನಲ್ಲಿರುವ ಅತೃಪ್ತರ ಗ್ಯಾಂಗ್ ಸೇರಿಕೊಳ್ಳಲು ಶ್ರೀಮಂತ್ ಪಾಟೀಲ್ ಈ ಪ್ರಹಸನ ನಡೆಸಿದರೇ ಎಂಬ ಪ್ರಶ್ನೆ ಕೂಡ ರಾಜಕೀಯ ವಲಯದಲ್ಲಿ ಉದ್ಭವವಾಗಿದೆ.