ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಚರ್ಚೆ ಆರಂಭಗೊಂಡಿದ್ದು ಒಟ್ಟು 20 ಶಾಸಕರು ಗೈರು ಹಾಜರಿ ಹಾಕಿದ್ದಾರೆ.
ಇಂದು ಸದನದಲ್ಲಿ ನಡೆಯುತ್ತಿರುವ ವಿಶ್ವಾಸ ಮತಯಾಚನೆ ಚರ್ಚೆಗೆ ಕಾಂಗ್ರೆಸ್ಸಿನ 14, ಜೆಡಿಎಸ್ನ 3 ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರ ಜೊತೆ ಬಿಎಸ್ಪಿಯ ಎನ್ ಮಹೇಶ್ ಗೈರಾಗಿದ್ದಾರೆ.
ಜೆಡಿಎಸ್ನಿಂದ ರಾಜೀನಾಮೆ ಕೊಟ್ಟಿದ್ದ ಹುಣಸೂರು ಶಾಸಕ ಎಚ್ ವಿಶ್ವನಾಥ್, ಮಾಹಾಲಕ್ಷ್ಮಿ ಲೇಔಟ್ ಶಾಸಕ ಗೊಪಾಲಯ್ಯ ಹಾಗೂ ಕೆ. ಆರ್ ಪೇಟೆಯ ನಾರಾಯಣ ಗೌಡ ಸದನಕ್ಕೆ ಬಂದಿಲ್ಲ.
ಇತ್ತ ರಾಜೀನಾಮೆ ಕೊಟ್ಟ ಕೈ ಶಾಸಕರು ಕೂಡ ಸದನಕ್ಕೆ ಎಂಟ್ರಿ ಕೊಟ್ಟಿಲ್ಲ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಯಶವಂತಪುರದ ಎಸ್.ಟಿ ಸೋಮಶೇಖರ್, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್, ಅಥಣಿಯ ಮಹೇಶ್ ಕುಮಟಳ್ಳಿ, ಕೆ.ಆರ್ ಪುರಂನ ಭೈರತಿ ಬಸವರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಶಿವಾಜಿನಗರದ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ ಪಾಟೀಲ್, ಬಳ್ಳಾರಿಯ ನಾಗೇಂದ್ರ ವಿಶ್ವಾಸಮತಯಾಚನೆ ಬಾರದೆ ಕೈ ಕೊಟ್ಟಿದ್ದಾರೆ.
ಪಕ್ಷೇತರ ಶಾಸಕರಾದ ಮುಳಬಾಗಿಲು ಶಾಸಕ ಎಚ್ ನಾಗೇಶ್ ಹಾಗೂ ರಾಣೆಬೆನ್ನೂರು ಶಾಸಕ ಆರ್ ಶಂಕರ್ ಕೂಡ ಸದನಕ್ಕೆ ಗೈರಾಗಿದ್ದಾರೆ.