ಬೆಂಗಳೂರು, ಜು.17-ರಾಜೀನಾಮೆ ನೀಡಿ ಮುಂಬೈನಲ್ಲಿರುವವರನ್ನೂ ಒಳಗೊಂಡಂತೆ ಕಾಂಗ್ರೆಸ್ನ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಲಾಗುವುದು ಎಂದು ಸರ್ಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಧಿವೇಶನದಲ್ಲಿ ಭಾಗವಹಿಸುವಂತೆ ಎಲ್ಲಾ ಶಾಸಕರಿಗೂ ವಿಪ್ ನೀಡಲಾಗಿದೆ. ಅದನ್ನು ಉಲ್ಲಂಘಿಸಿದವರ ವಿರುದ್ಧ ನಿಯಮಾವಳಿ ಅನುಸಾರ ಕ್ರಮ ಕೈಗೊಳ್ಳಲು ಅವಕಾಶವಿದೆ. ನಾಳೆ ವಿಶ್ವಾಸಮತ ಯಾಚನೆ ವೇಳೆ ಎಲ್ಲಾ ಶಾಸಕರು ಹಾಜರಿರಬೇಕು ಎಂದು ವಿಪ್ ನೀಡಲಾಗುವುದು.ಈ ಬಗ್ಗೆ ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಅಧಿವೇಶನದಲ್ಲಿ ಶಾಸಕರು ಭಾಗವಹಿಸುವಂತೆ ಒತ್ತಾಯ ಮಾಡುವಂತಿಲ್ಲ ಎಂದು ತೀರ್ಪು ನೀಡಿದ್ದು, ಶಾಸಕಾಂಗ ಪಕ್ಷ ನೀಡುವ ವಿಪ್ನ್ನು ಪಾಲಿಸಲೇ ಬೇಕು ಎಂಬ ಕಟ್ಟಳೆಗೆ ವಿನಾಯಿತಿ ನೀಡಿದೆ. ಅದರ ಹೊರತಾಗಿಯೂ ಕಾಂಗ್ರೆಸ್ ಶಾಸಕಾಂಗ ಪಕ್ಷ ತನ್ನೆಲ್ಲ ಶಾಸಕರಿಗೆ ವಿಪ್ ನೀಡುತ್ತಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾರನ್ನೂ ಬಲವಂತ ಮಾಡದೆ ವಿಪ್ ಜಾರಿಗೊಳಿಸಲು ಪಕ್ಷ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.