ಸುಪ್ರೀಂಕೋರ್ಟ್ ತೀರ್ಪು ಹಿನ್ನಲೆ-ಮಹತ್ವದ ಸಭೆ ನಡೆಸಿದ ಮೈತ್ರಿ ಪಕ್ಷದ ಮುಖಂಡರು

ಬೆಂಗಳೂರು, ಜು.17-ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ರಣಾಂಗಣಕ್ಕೆ ಇಳಿದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅಂತಿಮ ಸುತ್ತಿನಲ್ಲಿ ಮಹತ್ವ ಸಭೆ ನಡೆಸಿದ್ದಾರೆ.

ಇಂದು ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವರಾದ ಕೃಷ್ಣಭೆರೇಗೌಡ ಮತ್ತಿತರರು ಸಚಿವ ಕೆ.ಜೆ.ಜಾರ್ಜ್ ಅವರ ಮನೆಯಲ್ಲಿ ತುರ್ತು ಸಭೆ ನಡೆಸಿದರು.

ದೊಮ್ಮಲೂರಿನ ಎಂಬೆಸಿ ಗಾಲ್ಫ್ ಲಿಂಕ್ಸ್ ನಲ್ಲಿರುವ ಕೆ.ಜೆ.ಜಾರ್ಜ್ ಮನೆಗೆ ಮೊದಲು ಆಗಮಿಸಿದ ಕಾಂಗ್ರೆಸ್ ನಾಯಕರು, ನಂತರ ಕುಮಾರಸ್ವಾಮಿಯವರನ್ನು ಕರೆಸಿಕೊಂಡರು.ಸಭೆಯ ಬಳಿಕ ಪ್ರಮುಖ ನಾಯಕರು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮುಂಬೈನಲ್ಲಿರುವ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ನಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ, ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ವಿಡಿಯೋ ಸಂದೇಶದಲ್ಲಿ ಖಚಿತಪಡಿಸಿದ್ದಾರೆ. ಅದರ ಹೊರತಾಗಿಯೂ ಕೆಲವು ಶಾಸಕರನ್ನು ಸಂಪರ್ಕಿಸಿ ಸಂಧಾನ ನಡೆಸುವ ಪ್ರಯತ್ನವನ್ನು ದೋಸ್ತಿ ನಾಯಕರು ಮಾಡಿದ್ದಾರೆ.

ಅಂತಿಮವಾಗಿ ಎಲ್ಲಾ ಪ್ರಯತ್ನಗಳು ವಿಫಲವಾದರೆ ಸ್ಪೀಕರ್ ಅವರನ್ನು ಭೇಟಿ ಮಾಡಿ ಅನರ್ಹತೆಯ ದೂರಿನ ವಿಚಾರಣೆಗೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಈಗಾಗಲೇ ಅತೃಪ್ತ ಶಾಸಕರಾದ ರಮೇಶ್ ಜಾರಕಿ ಹೊಳಿ ಮತ್ತು ಮಹೇಶ್ ಕುಮಟಳ್ಳಿ ಅವರುಗಳ ಶಾಸಕತ್ವ ಅನರ್ಹಗೊಳಿಸಲು ಪ್ರಕ್ರಿಯೆಗಳು ಆರಂಭಗೊಂಡಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಗ್ಗೆಯೊಳಗೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

ಸ್ಪೀಕರ್ ರಮೇಶ್‍ಕುಮಾರ್ ಅವರು ಸುಪ್ರೀಂಕೋರ್ಟ್‍ನಿಂದ ತೀರ್ಪು ಹೊರಬಿದ್ದ ಬಳಿಕ ಕೋಲಾರದಿಂದ ಬೆಂಗಳೂರಿನತ್ತ ಆಗಮಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ