ಕುಲಭೂಷಣ್ ಜಾಧವ್ ಪ್ರಕರಣ-ಮಹತ್ವದ ತೀರ್ಪು ನೀಡಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ

ನವದೆಹಲಿ, ಜು.17– ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ಸಂಬಂಧ ಇಂದು ಸಂಜೆ ನೆದರ್‍ಲ್ಯಾಂಡ್ಸ್‍ನ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಮಹತ್ವದ ತೀರ್ಪು ನೀಡಲಿದೆ.

ಈ ಪ್ರಕರಣದಲ್ಲಿ ಪಾಕಿಸ್ತಾನದ ಕುತಂತ್ರ ಹಾಗೂ ಲೋಪದೋಷಗಳ ಸಾಕ್ಷ್ಯಾಧಾರಗಳೊಂದಿಗೆ ಸಮರ್ಥ ವಾದ ಮಂಡಿಸಲು ಭಾರತ ಸಜ್ಜಾಗಿದೆ. ಇದಕ್ಕೆ ಪೂರಕವಾಗಿ ಕುಲಭೂಷಣ್ ಯಾದವ್ ಅವರ ಅಪಹರಣದ ಹಿಂದೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಕುಮ್ಮಕ್ಕು ಇರುವ ಬಗ್ಗೆ ಭಾರತಕ್ಕೆ ಕೆಲವೊಂದು ಮಹತ್ವದ ಸಾಕ್ಷ್ಯಾಧಾರಗಳು ಲಭಿಸಿವೆ.

ಇರಾನ್ ಜತೆ ಪಾಕಿಸ್ತಾನದ ಸಂಬಂಧ ಹಳಸಿದ್ದು, ಆದೇಶದಲ್ಲೂ ಕೂಡ ಭಯೋತ್ಪಾದನೆ ಚಟುವಟಿಕೆಗಳಿಗೆ ಇಸ್ಲಾಮಾಬಾದ್ ಪ್ರಚೋದನೆ ನೀಡುತ್ತಿರುವ ಸಂಗತಿ ಹೊಸದೇನಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಜೈಷ್-ವುಲ್-ಅಬ್ದಲ್ ಎಂಬ ಉಗ್ರಗಾಮಿ ಸಂಘಟನೆಯನ್ನು ಇರಾನ್-ಪಾಕ್ ಗಡಿಯಲ್ಲಿ ಭಯೋತ್ಪಾದನೆ ಕೃತ್ಯಗಳಿಗೆ ಪಾಕಿಸ್ತಾನ ಬಳಿಸುತ್ತಿದೆ ಎಂದು ಬಲವಾದ ಸಾಕ್ಷ್ಯಾಧಾರವಿದೆ.

ಇರಾನ್‍ನ ಚಾಬಹರ್ ಪ್ರದೇಶದಿಂದ ಕುಲಭೂಷಣ್ ಯಾದವ್‍ರನ್ನು ಇದೇ ಉಗ್ರಗಾಮಿ ಸಂಘಟನೆ ಶಸ್ತ್ರ ಸಜ್ಜಿತ ಭಯೋತ್ಪಾದಕರು ಅಪಹರಿಸಿ ಅವರನ್ನು ಪಾಕಿಸ್ತಾನದ ಐಎಸ್‍ಐ ಒಪ್ಪಿಸಿತ್ತು ಎಂಬ ಸಂಗತಿ ದೃಢಪಟ್ಟಿದೆ.

ಇದನ್ನು ಇರಾನ್ ಉನ್ನತ ಸೇನಾಧಿಕಾರಿಯೊಬ್ಬರು ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಐಎಸ್‍ಐ ಅನತಿಯಂತೆಯೇ ಜೈಷ್-ವುಲ್-ಅಬ್ದಲ್ ಉಗ್ರರು ಜಾಧವ್‍ರನ್ನು ಅಪಹರಿಸಿ ಪಾಕ್ ಬೇಹುಗಾರಿಕೆ ಸಂಸ್ಥೆಗೆ ಒಪ್ಪಿಸಿದ ನಂತರ ಅವರ ವಿರುದ್ಧ ಸುಳ್ಳು ಬೇಹುಗಾರಿಕೆ ಪ್ರಕರಣಗಳನ್ನು ಪಾಕಿಸ್ತಾನ ದಾಖಲಿಸಿದ ಸಂಗತಿ ಈಗ ಬಯಲಾಗಿದೆ.

ಭಾರತ ಈ ಅಂಶವನ್ನು ಐಸಿಜೆ(ಅಂತಾರಾಷ್ಟ್ರೀಯ ನ್ಯಾಯಾಲಯ) ಮುಂದೆ ಇಂದು ಮಂಡಿಸಲಿದೆ.

ಪಾಕಿಸ್ತಾನ ಬೆಂಬಲಿತ ಜೈಷ್-ವುಲ್-ಅಬ್ದಲ್ ಉಗ್ರಗಾಮಿ ಸಂಘಟನೆಯನ್ನು ಇತ್ತೀಚೆಗಷ್ಟೆ ಅಮೆರಿಕ ನಿಯೋಜಿತ ಅಂತಾರಾಷ್ಟ್ರೀಯ ಭಯೋತ್ಪಾದನೆ ಪಟ್ಟಿಯಲ್ಲಿ ಸೇರಿಸಿದೆ.

ಜಾಧವರನ್ನು ಉದ್ದೇಶಪೂರಕವಾಗಿ ಅಪಹರಿಸಿ ಸುಳ್ಳು ಬೇಹುಗಾರಿಕೆ ಆರೋಪ ಹೊರಿಸಿ ಮರಣದಂಡನೆ ಶಿಕ್ಷೆ ಆದೇಶ ಹೊರಡಿಸಲು ಪಾಕಿಸ್ತಾನ ಮಿಲಿಟರಿ ನ್ಯಾಯಾಲಯಕ್ಕೆ ಐಎಸ್‍ಐ ಸಂಪೂರ್ಣ ತಪ್ಪು ಮಾಹಿತಿ ನೀಡಿದೆ ಎಂಬ ಅಂಶ ಈಗ ಬಯಲಾಗಿದೆ.

ಇಂದು ಸಂಜೆ ಜಾಧವ್ ಪ್ರಕರಣ ಅಂತಿಮ ವಿಚಾರಣೆ ನಡೆಯಲಿದ್ದು, ಭಾರತದ ಪರ ಬಲವಾದ ಸಾಕ್ಷ್ಯಾಧಾರ, ಪುರಾವೆಗಳಿರುವುದರಿಂದ ಅವರು ನೇಣು ಕುಣಿಕೆಯಿಂದ ಪಾರಾಗುವ ಆಶಾ ಭಾವನೆ ಹೊರ ಹೊಮ್ಮಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ