ಅತೃಪ್ತರು ವಾಪಾಸ್ ಬರೋದಾದ್ರೆ ನಾನೇ ರೇವಣ್ಣ ರಾಜೀನಾಮೆ ಕೊಡಿಸುವೆ; ಎ.ಟಿ. ರಾಮಸ್ವಾಮಿ ಅಚ್ಚರಿಯ ಹೇಳಿಕೆ

ಹಾಸನ; ಮುಂಬೈನಲ್ಲಿರುವ ಅತೃಪ್ತ ಶಾಸಕರು ಪಕ್ಷಕ್ಕೆ ಹಿಂದಿರುಗಿ ಸರ್ಕಾರದ ಪರ ನಿಂತರೆ ಸಚಿವ ಹೆಚ್.ಡಿ. ರೇವಣ್ಣ ಅವರಿಂದ ನಾನೇ ರಾಜೀನಾಮೆ ಕೊಡಿಸುವೆ ಎಂದು ಅರಕಲಗೋಡು ಜೆಡಿಎಸ್ ಶಾಸಕ .ಟಿ. ರಾಮಸ್ವಾಮಿ ತಿಳಿಸಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿದ ಅವರು, “ಅತೃಪ್ತ ಶಾಸಕರಿಗೆ ಹೆಚ್.ಡಿ. ರೇವಣ್ಣ ಅವರ ವಿರುದ್ಧ ಅಸಮಾಧಾನ ಇದೆ. ಇದೇ ಕಾರಣಕ್ಕೆ ಅವರು ಪಕ್ಷವನ್ನು ತ್ಯಜಿಸಿದ್ದರೆ, ರೇವಣ್ಣ ಅವರಿಂದ ರಾಜೀನಾಮೆ ಕೊಡಿಸಲು ನಾನೇ ಪ್ರಯತ್ನಿಸುವೆ” ಎಂದು ವಿಶ್ವಾದ ವ್ಯಕ್ಯಪಡಿಸಿದ್ದಾರೆ.

ಅತೃಪ್ತರ ನಡೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, “ಅತೃಪ್ತ ಶಾಸಕರಿಗೆ ಪಕ್ಷ ಬಿಟ್ಟು ಹೊರಗೆ ಹೋಗುವುದಕ್ಕೆ ಒಂದು ಕಾರಣ ಬೇಕಿತ್ತು. ಅದಕ್ಕೆ ರೇವಣ್ಣ ಅವರ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಅಸಲಿಗೆ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ಲೋಕಸಭೆಯಲ್ಲಿ ಕಡಿಮೆ ಮತ ಗಳಿಸಿದೆ. ಇದೇ ಕಾರಣಕ್ಕೆ ಅವರು ಪಕ್ಷವನ್ನು ತ್ಯಜಿಸುತ್ತಿದ್ದಾರೆ. ಆದರೆ, ಅಭಿವೃದ್ಧಿ ವಿಚಾರದಲ್ಲಿ ವೇಗವಾಗಿ ಕೆಲಸ ಮಾಡುತ್ತಿರುವ ರೇವಣ್ಣ ಅವರ ಏಳಿಗೆ ಸಹಿಸದೆ ಹೀಗೆ ಅವರ ವಿರುದ್ದ ಸಲ್ಲದ ಆರೋಪ ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಗಳುಭಟರಿಂದಲೇ ಸರ್ಕಾರ ಈ ಸ್ಥಿತಿಗೆ ಬಂದಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಖೇದ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ಯಶವಂತಪುರ ಶಾಸಕ ಸೋಮಶೇಖರ್ ಸಿದ್ದರಾಮಯ್ಯ ನಮ್ಮ ಆನೆ, ಅವರಿದ್ದರೆ ನಮಗೆ ಆನೆ ಬಲ ಎಂದರು. ಇನ್ನೂ ಎಂಟಿಬಿ ನಾಗರಾಜ್ ನನ್ನ ಎದೆ ಬಗೆದರೆ ಅದು ಸಿದ್ದರಾಮಯ್ಯ, ಸಿದ್ದರಾಮಯ್ಯ ಅನ್ನುತ್ತೆ ಎಂದರು. ಆದರೆ, ಈಗ ಅವರೆಲ್ಲ ಎಲ್ಲಿಗೆ ಹೋದರು? ಎಂದು ಪ್ರಶ್ನೆ ಮಾಡಿದ ರಾಮಸ್ವಾಮಿ ಯಾವುದೇ ಪಕ್ಷದಲ್ಲಿ ಹೊಗಳುಭಟರು ಇರುವುದು ಒಳ್ಳೆಯದಲ್ಲ. ಅವರಿಂದಲೇ ಸರ್ಕಾರ ಈ ಸ್ಥಿತಿಗೆ ಬಂದಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ