ಶಾಸಕ ರೋಷನ್‍ಬೇಗ್‍ರವರ ತೀವ್ರ ವಿಚಾರಣೆ ನಡೆಸಿದ ಎಸ್‍ಐಟಿ

ಬೆಂಗಳೂರು,ಜು.16- ಶಿವಾಜಿನಗರದ ಶಾಸಕರಾದ ರೋಷನ್‍ಬೇಗ್ ಅವರನ್ನು ಇಂದು ಎಸ್‍ಐಟಿ ತೀವ್ರ ವಿಚಾರಣೆಗೊಳಪಡಿಸಿ ಬಿಡುಗಡೆಗೊಳಿಸಿದೆ.

ಇದೇ 19ರಂದು ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಅವರನ್ನು ಕಳುಹಿಸಲಾಗಿದೆ ಎಂದು ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ.

ರಾತ್ರಿ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಲು ರೋಷನ್ ಬೇಗ್ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆಂಬ ಮಾಹಿತಿ ಮೇರೆಗೆ ಎಸ್‍ಐಟಿ ತಂಡ, ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿತ್ತು.

ಬಹುಕೋಟಿ ರೂ.ವಂಚನೆ ಪ್ರಕರಣದ ಆರೋಪಿ ಐಎಂಎ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್ ಖಾನ್‍ನೊಂದಿಗೆ ನಿಮಗಿರುವ ಸಂಬಂಧವೇನು? ನಿಮ್ಮಿಬ್ಬರ ನಡುವೆ ಹಣಕಾಸು ವಹಿವಾಟು ನಡೆದಿದೆಯೇ ಅವರೊಂದಿಗೆ ಯಾವ ರೀತಿ ವ್ಯವಹಾರ ಇತ್ತು ಎಂಬಿತ್ಯಾದಿ ಪ್ರಶ್ನೆಗಳನ್ನು ರೋಷನ್‍ಬೇಗ್ ಅವರಿಗೆ ಕೇಳಿ ಐಎಸ್‍ಟಿ ಅಧಿಕಾರಿಗಳು ಉತ್ತರ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಐಎಂಎ ಸಂಸ್ಥೆ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್‍ಖಾನ್ ದೇಶ ಬಿಟ್ಟು ಹೋದ ನಂತರ ಬಿಡುಗಡೆ ಮಾಡಿದ ಆಡಿಯೋದಲ್ಲಿ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರು 400 ಕೋಟಿ ಹಣವನ್ನು ನನ್ನಿಂದ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೇಗ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ನೋಟಿಸ್ ನೀಡಿತ್ತು.

ರೋಷನ್ ಬೇಗ್ ಅವರು ಜು.11ರಂದು ವಿಚಾರಣೆಗೆ ಹಾಜರಾಗದೆ ಕಾಲಾವಕಾಶ ಕೋರಿದ್ದರು. ನಂತರ ಜು.15ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ನೋಟಿಸ್ ನೀಡಿದ್ದರೂ ಹಾಜರಾಗಿರಲಿಲ್ಲ. ರಾತ್ರಿ ಬೇಗ್ ಮುಂಬೈಗೆ ತೆರಳಲು ಸಜ್ಜಾಗಿದ್ದರಿಂದ ಎಸ್‍ಐಟಿ ವಿಮಾನ ನಿಲ್ದಾಣದಲ್ಲಿ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡು ರಾತ್ರಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತೀವ್ರ ವಿಚಾರಣೆಗೊಳಪಡಿಸಿತ್ತು. ಬೆಳಗ್ಗೆಯೂ ಸಹ ಹಲವು ಪ್ರಶ್ನೆಗಳಿಗೆ ಬೇಗ್ ಅವರಿಂದ ಎಸ್‍ಐಟಿ ಉತ್ತರ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ