ಸುಪ್ರೀಂಕೋರ್ಟ್ ತೀರ್ಪನ್ನು ಎದುರು ನೋಡುತ್ತಿರುವ ಜೆಡಿಎಸ್

ಬೆಂಗಳೂರು,ಜು.16- ಶಾಸಕರ ರಾಜೀನಾಮೆ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಜೆಡಿಎಸ್ ಎದುರು ನೋಡುತ್ತಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯ ನೀಡುವ ತೀರ್ಪಿನ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಕಳೆದ ಒಂದು ವಾರದಿಂದಲೂ ಕಾಂಗ್ರೆಸ್-ಜೆಡಿಎಸ್ ನಾಯಕರು ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ನಿರಂತರ ಪ್ರಯತ್ನವನ್ನು ನಡೆಸಿದರು. ನಿರೀಕ್ಷಿತ ಫಲ ದೊರೆಯಲಿಲ್ಲ. ಈ ನಡುವೆ ಜು.18ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡಲು ಸಮಯ ನಿಗದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನಾಧರಿಸಿ ಮುಂದಿನ ಹೆಜ್ಜೆ ಇಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಜೆಡಿಎಸ್ ವರಿಷ್ಠರು ಬಂದಿದ್ದಾರೆ.

ಈ ವಿಚಾರವನ್ನು ರೆಸಾರ್ಟ್‍ನಲ್ಲಿರುವ ಪಕ್ಷದ ಶಾಸಕರಿಗೂ ಮನವರಿಕೆ ಮಾಡಿಕೊಡಲಾಗಿದೆ. ಕೊನೆ ಗಳಿಗೆಯವರೆಗೂ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸಲಾಗುತ್ತಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕಾನೂನು ಹೋರಾಟಕ್ಕೂ ಮುಂದಾಗಿದೆ. ಆ ವಿಚಾರದಲ್ಲಿ ವಿಧಾನಸಭಾಧ್ಯಕ್ಷರು ನೀಡುವ ತೀರ್ಪನ್ನು ಕೂಡ ಕಾದು ನೋಡಲು ಜೆಡಿಎಸ್ ತೀರ್ಮಾನಿಸಿದೆ.

ಶಾಸಕರ ರಾಜೀನಾಮೆಯಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮೇಲ್ನೋಟಕ್ಕೆ ಪತನದಂಚಿಗೆ ತಲುಪಿದಂತಾಗಿದೆ. ಆದರೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವ ದೃಢವಿಶ್ವಾಸವನ್ನು ಹೊಂದಿದ್ದಾರೆ. ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ಪಡೆಯುತ್ತಿರುವುದರಿಂದ ಎಲ್ಲ ಶಾಸಕರು ವರಿಷ್ಠರ ಸೂಚನೆ ಮೇರೆಗೆ ಒಗ್ಗಟ್ಟಾಗಿರಲು ತೀರ್ಮಾನಿಸಿದ್ದಾರೆ.

ಒಟ್ಟಾರೆ ಸುಪ್ರೀಂಕೋರ್ಟ್ ನೀಡುವ ಹಾಗೂ ಸಭಾಧ್ಯಕ್ಷರು ನೀಡುವ ತೀರ್ಪನ್ನು ಜೆಡಿಎಸ್ ಕಾದು ನೋಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ