ದೆಹಲಿಯಲ್ಲಿರುವ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯವನ್ನು ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳ ಸ್ಮಾರಕವನ್ನಾಗಿ ಪರಿವರ್ತಿಸುವ ಯಾವುದೇ ಪ್ರಯತ್ನವನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿಂದು ನಿರಾಕರಿಸಿದೆ.
ಕೇಂದ್ರ ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ, ದೆಹಲಿಯ ತೀನ್ ಮೂರ್ತಿ ಸಂಕೀರ್ಣದಲ್ಲಿ ದೇಶದ ಪ್ರಧಾನಮಂತ್ರಿಗಳ ನೂತನ ವಸ್ತು ಸಂಗ್ರಹಾಲಯ ಸ್ಥಾಪಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ. ಮುಂದಿನ ವರ್ಷದ ಅಕ್ಟೋಬರ್ ವೇಳೆಗೆ ಈ ಮ್ಯೂಸಿಯಂ ಆರಂಭಗೊಳ್ಳುವ ಸಾಧ್ಯತೆ ಇದೆ. ದೇಶದ ಮಾಜಿ ಪ್ರಧಾನಮಂತ್ರಿಗಳ ವ್ಯಕ್ತಿತ್ವ, ಅವರ ಜೀವನ ಹಾಗೂ ಕಚೇರಿ ಕುರಿತ ಕುತೂಹಲವನ್ನು ತಣಿಸಲು ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ಮಾಹಿತಿ ನೀಡುವುದು ಈ ಮ್ಯೂಸಿಯಂನ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.