ಬೆಂಗಳೂರು, ಜು.16-ಆಪರೇಷನ್ ಕಮಲದ ಭೀತಿಯಿಂದ ದೇವನಹಳ್ಳಿ ಬಳಿಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರು ಗುರುವಾರದವರೆಗೂ ಅಲ್ಲೇ ಉಳಿಯಲಿದ್ದಾರೆ.
ಆಡಳಿತ ಪಕ್ಷದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರೆಸಾರ್ಟ್ಗೆ ತೆರಳಿರುವ ಜೆಡಿಎಸ್ ಶಾಸಕರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಸಾಬೀತುಪಡಿಸುವವರೆಗೂ ರೆಸಾರ್ಟ್ನಲ್ಲೇ ವಾಸ್ತವ್ಯ ಹೂಡಲು ತೀರ್ಮಾನಿಸಿದ್ದಾರೆ.
ಕಳೆದ ಒಂದು ವಾರದಿಂದ ರೆಸಾರ್ಟ್ನಲ್ಲೇ ಬೀಡುಬಿಟ್ಟಿರುವ ಶಾಸಕರು ಅಲ್ಲಿಂದಲೇ ವಿಧಾನಸಭೆ ಅಧಿವೇಶನಕ್ಕೆ ಎರಡು ದಿನ ಆಗಮಿಸಿದ್ದರು. ಶಾಸಕರೆಲ್ಲರೂ ಒಟ್ಟಾಗಿರಬೇಕು. ಯಾವುದೇ ಕಾರಣಕ್ಕೂ ಬಿಜೆಪಿಯವರ ಸಂಪರ್ಕಕ್ಕೆ ಸಿಗಬಾರದೆಂಬ ಉದ್ದೇಶದಿಂದ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದಾರೆ.
ನಿನ್ನೆ ರಾತ್ರಿ ರೆಸಾರ್ಟ್ಗೆ ಭೇಟಿ ನೀಡಿದ ಕುಮಾರಸ್ವಾಮಿಯವರು ಯಾವುದೇ ಕಾರಣಕ್ಕೂ ಶಾಸಕರು ಧೈರ್ಯ ಕಳೆದುಕೊಳ್ಳಬಾರದು. ರಾಜಕೀಯ ಬೆಳವಣಿಗೆಗಳು ಏನೇ ನಡೆಯಲಿ ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತ ಸಾಬೀತುಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಲಾಗಿದೆ. ವಿಶ್ವಾಸ ಮತವನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಶಾಸಕರು ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಅದಕ್ಕೆ ಬೇಕಾದ ಕಾರ್ಯತಂತ್ರ ರೂಪಿಸಲಾಗಿದೆ. ಶಾಸಕರು ಇದೇ ರೀತಿ ಒಗ್ಗಟ್ಟನ್ನು ಕಾಪಾಡಿಕೊಂಡು ಬರಬೇಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆ ಪ್ರಯತ್ನಗಳು ಕಾಂಗ್ರೆಸ್ ನಾಯಕರಿಂದಲೂ ನಡೆಯುತ್ತಿವೆ. ತಮ್ಮೊಂದಿಗೂ ಕೆಲವರು ಸಂಪರ್ಕದಲ್ಲಿದ್ದಾರೆ. ಕೊನೆ ಘಳಿಗೆಯವರೆಗೂ ಕಾದುನೋಡೋಣ ಎಂದು ಶಾಸಕರಿಗೆ ತಿಳಿಸಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ವಿಚಾರ ಚರ್ಚೆಗೆ ಬರಲಿದ್ದು, ಆ ಅಧಿವೇಶನಕ್ಕೆ ರೆಸಾರ್ಟ್ನಿಂದಲೇ ಎಲ್ಲಾ ಶಾಸಕರು ಒಟ್ಟಾಗಿ ಬರಲು ನಿರ್ಧರಿಸಿದ್ದಾರೆ. ಹೀಗಾಗಿ ಇನ್ನೂ ಎರಡು ದಿನ ಜೆಡಿಎಸ್ ಶಾಸಕರು ರೆಸಾರ್ಟ್ನಲ್ಲೇ ಬಿಡಾರ ಹೂಡಲಿದ್ದಾರೆ.