ಶಾಸಕರನ್ನು ಪಂಚತಾರ ಹೋಟೆಲ್‍ನಿಂದ ರೆಸಾರ್ಟ್‍ಗೆ ಸ್ಥಳಾಂತರಿಸಿದ ಕಾಂಗ್ರೇಸ್

ಬೆಂಗಳೂರು, ಜು.16- ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ಪಂಚತಾರಾ ಹೊಟೇಲ್‍ನಿಂದ ದೇವನಹಳ್ಳಿ ಬಳಿಯ ರೆಸಾರ್ಟ್‍ಗೆ ಸ್ಥಳಾಂತರಿಸಲಾಗಿದೆ.

ಇಂದು ಬೆಳಗ್ಗೆ ಹೊಟೇಲ್‍ನಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕರ ಜೊತೆ ಸಭೆ ನಡೆಸಿದರು. ಈ ನಡುವೆ ಸುಪ್ರೀಂಕೋರ್ಟ್‍ನ ತೀರ್ಪಿನ ಬಗ್ಗೆಯೂ ನಿಗಾ ವಹಿಸಲಾಗಿತ್ತು. ತೀರ್ಪು ಪ್ರಕಟಗೊಂಡ ಬಳಿಕ ಶಾಸಕರನ್ನು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬೆಂಗಳೂರಿನ ಪಂಚತಾರಾ ಹೊಟೇಲ್‍ನಿಂದ ದೇವನಹಳ್ಳಿ ಬಳಿಯ ಪ್ರಕೃತಿ ರೆಸಾರ್ಟ್‍ಗೆ ಸ್ಥಳಾಂತರಿಸಲಾಗಿದೆ.

ಬೆಂಗಳೂರು ನಗರದ ಮಧ್ಯಭಾಗದಲ್ಲಿರುವ ತಾಜ್ ವಿವಾಂತ ಹೊಟೇಲ್‍ನಲ್ಲಿ ಕಾಂಗ್ರೆಸ್ ಶಾಸಕರನ್ನು ಕಳೆದ ಮೂರು ದಿನಗಳಿಂದ ಇರಿಸಲಾಗಿತ್ತು. ಗುರುವಾರ ವಿಶ್ವಾಸ ಮತಯಾಚನೆಗೆ ದಿನಾಂಕ ನಿಗದಿಯಾಗಿರುವುದರಿಂದ ಆವರೆಗೂ ಶಾಸಕರು ಹೊಟೇಲ್‍ನಲ್ಲೇ ತಂಗಬೇಕಿದೆ.

ಯಶವಂತಪುರದಲ್ಲಿರುವ ಈ ಹೊಟೇಲ್‍ನಿಂದ ಶಾಸಕರು ಮನೆಗೂ ಹೊಟೇಲ್‍ಗೂ ಓಡಾಡುತ್ತಿದ್ದು, ಅವರನ್ನು ರಕ್ಷಿಸಿಟ್ಟುಕೊಳ್ಳುವುದು ಕಷ್ಟವಾಗಿದೆ. ಹಾಗಾಗಿ ಸಿಟಿಯಿಂದ ಸ್ವಲ್ಪ ದೂರವಿರಬೇಕು ಎಂಬ ಕಾರಣಕ್ಕಾಗಿ ದೇವನಹಳ್ಳಿ ಬಳಿಯ ರೆಸಾರ್ಟ್‍ಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ