ಬಹುಮತವಿಲ್ಲದ ಸರ್ಕಾರದಿಂದ ಕಲಾಪ ನಡೆಸುವುದು ಬೇಡ-ಪ್ರತಿಪಕ್ಷ ಬಿಜೆಪಿ

ಬೆಂಗಳೂರು, ಜು.16-ಕಲಾಪ ನಡೆಸುವಂತೆ ಆಡಳಿತ ಪಕ್ಷದಿಂದ ಆಗ್ರಹ… ಬಹುಮತವಿಲ್ಲದೆ ಸರ್ಕಾರದಿಂದ ಕಲಾಪ ನಡೆಸುವುದು ಬೇಡ ಎಂದು ಪ್ರತಿಪಕ್ಷ ಬಿಜೆಪಿಯಿಂದ ಧರಣಿ… ಮಾತಿನ ಚಕಮಕಿ, ಗದ್ದಲ, ಕೋಲಾಹಲದ ವಾತಾವರಣ ಉಂಟಾದ ಕಾರಣ ಮೇಲ್ಮನೆ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.

ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸರ್ಕಾರದ ವಿರುದ್ಧ ಬಿಜೆಪಿಯವರು ಹಾಗೂ ಪ್ರತಿಪಕ್ಷದ ವಿರುದ್ಧ ಆಡಳಿತ ಪಕ್ಷದವರು ಪರಸ್ಪರ ಭಿತ್ತಿಪತ್ರ ಪ್ರದರ್ಶನ ಮಾಡಿ ಘೋಷಣೆಗಳನ್ನು ಕೂಗಿಕೊಂಡರು. ಇದರಿಂದ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಮುಖ್ಯಮಂತ್ರಿ ಹೊರತುಪಡಿಸಿ ಸಚಿವರೆಲ್ಲ ರಾಜೀನಾಮೆ ನೀಡಿದ್ದಾರೆ. 16 ಶಾಸಕರು ರಾಜೀನಾಮೆ ನೀಡಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಆಡಳಿತ ನಡೆಸಲು ಅರ್ಹತೆಯಿಲ್ಲದ ಸರ್ಕಾರದಿಂದ ಯಾವ ಉತ್ತರವೂ ಬೇಕಾಗಿಲ್ಲ ಎಂದು ಹೇಳಿದರು.

ಜೆಡಿಎಸ್‍ನ ಶ್ರೀಕಂಠೇಗೌಡ ಮಾತನಾಡಿ, ನಾಡಿನಲ್ಲಿ ಜ್ವಲಂತ ಸಮಸ್ಯೆಗಳಿವೆ. ಪ್ರಶ್ನೋತ್ತರ ಕಲಾಪಗಳನ್ನು ಕೈಗೆತ್ತಿಕೊಳ್ಳಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಸರ್ಕಾರ ಜೀವಂತ ಶವವಾಗಿದೆ.ಅಲ್ಪಮತಕ್ಕೆ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮುಂದುವರೆಯುವುದು ರಾಜ್ಯಕ್ಕೇ ಅವಮಾನ ಎಂದು ಪ್ರತಿಪಕ್ಷದ ಸದಸ್ಯರು ಟೀಕಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, ಸರ್ಕಾರ ಇರೋದಕ್ಕೆ ನಾವು ಇಲ್ಲಿರೋದು. ನಾವು ಉತ್ತರ ಕೊಡಲು ಸಿದ್ಧರಾಗಿದ್ದೇವೆ. ಪ್ರಶ್ನೋತ್ತರ ಕಲಾಪ ಮುಂದುವರೆಸುವಂತೆ ಮನವಿ ಮಾಡಿದರು.

ಬಾವಿಯಲ್ಲಿದ್ದ ಬಿಜೆಪಿ ಸದಸ್ಯರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.

ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಕೂಡ ಪ್ರತಿಪಕ್ಷ ಬಿಜೆಪಿ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಲಾರಂಭಿಸಿದರು.

ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ಉಂಟಾಗಿ ಕಲಾಪವನ್ನು ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಕೆಲ ಕಾಲ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ