ಬೆಂಗಳೂರು,ಜು.16- ಎಸ್ಐಟಿ ವಿಚಾರಣೆ ನೆಪದಲ್ಲಿ ಶಾಸಕ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆಯುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ.
ರಮಡಾ ರೆಸಾರ್ಟ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಶಾಸಕರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಸ್ಐಟಿ ಬಳಸಿಕೊಂಡು ದುರುದ್ದೇಶದಿಂದ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದಾರೆ. ನಾವು ಶಾಸಕರಿಗೆ ಅನ್ಯಾಯವಾದಾಗ ಧ್ವನಿಯೆತ್ತುತ್ತೇವೆ. ಸುಧಾಕರ್ ಮೇಲೆ ಹಲ್ಲೆಯಾದಗಲೂ ಅವರ ಪರವಾಗಿದ್ದೆವು, ಈಗಲೂ ಬೇಗ್ ಪರ ಇದ್ದೇವೆ ಎಂದರು.
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಹಿರಿಯ ಶಾಸಕರ ವಿರುದ್ಧ ಎಸ್ಐಟಿ ಅಸ್ತ್ರ ಪ್ರಯೋಗಿಸಿರುವುದನ್ನು ಖಂಡಿಸುತ್ತೇವೆ. ಎಸ್ಐಟಿ ಜುಲೈ 19ರಂದು ವಿಚಾರಣೆಗೆ ಹಾಜರಾಗಬೇಕೆಂದು ಮೊದಲೇ ನೋಟೀಸ್ ನೀಡಿದೆ. ಹಾಗಿದ್ದಾಗ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಅವಶ್ಯಕತೆ ಏನಿತ್ತು ಎಂಬುದನ್ನು ಸಿಎಂ ತಿಳಿಸಬೇಕು ಎಂದು ಒತ್ತಾಯಿಸಿದರು.
ಎಸ್ಐಟಿ ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ವಿರೋಧವಿಲ್ಲ. ಇನ್ನು ಅವರ ರಾಜೀನಾಮೆ ಅಂಗೀಕರಿಸಿಲ್ಲ. ಅವರ ಹುಟ್ಟುಹಬ್ಬದ ನಿಮಿತ್ತ ಬೇರೆಡೆ ತೆರಳುವ ವೇಳೆ ವಶಕ್ಕೆ ಪಡೆದಿದ್ದಾರೆ. ಸ್ಪೀಕರ್ ಗಮನಕ್ಕೆ ತರದೆ ರೋಷನ್ ಬೇಗ್ ಅವರನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಈ ಮೂಲಕ ಶಾಸಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಸ್ಪೀಕರ್ ಕೂಡಲೇ ರೋಷನ್ ಬೇಗ್ ರಕ್ಷಣೆಗೆ ಮಧ್ಯಪ್ರವೇಶಿಸಬೇಕು ಎಂದು ಹೇಳಿದರು.
ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿ, ಸನ್ಮಾನ್ಯ ಮುಖ್ಯಮಂತ್ರಿಗಳು ಅಧಿಕಾರ ಉಳಿಸಿಕೊಳ್ಳೋದಕ್ಕೆ ಶಾಸಕರ ಬಂಧಿಸುವ ಮೂಲಕ ವಾಮಾಮಾರ್ಗ ಅನುಸರಿಸುತ್ತಿದ್ದಾರೆ. ತನಿಖೆ ಮಾಡುಡುವುದು ತಪ್ಪು ಅಲ್ಲ. ಆದರೆ ಎಸ್ಐಟಿಯನ್ನು ಅಸ್ತ್ರವಾಗಿಟ್ಟುಕೊಂಡು ಶಾಸಕರನ್ನು ವಶಕ್ಕೆ ಪಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಶಾಸಕ ಕುಮಾರಸ್ವಾಮಿ ಮಾತನಾಡಿ, ಗುರುವಾರ ಬಹುಮತ ಸಾಬೀತು ಪಡಿಸುವುದಕ್ಕೋಸ್ಕರ ಶಾಸಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಈ ಮೂಲಕ ಕ್ರಿಮಿನಲ್ ತಂತ್ರ ಬಳಸುತ್ತಿದ್ದಾರೆ. ಮುಖ್ಯಮಂತ್ರಿಯಾದವರು ನಾಡಿಗೆ ಮಾದರಿಯಾಗಿರಬೇಕು. ಮನೆಗೆ ಹೊರಡುವ ಸಂದರ್ಭದಲ್ಲಿ ಜನರು ನಿಮಗೆ ಶಾಪ ಹಾಕುವಂತಿರಬಾರದು ಎಂದು ಛೇಡಿಸಿದರು.
ಶಾಸಕ ರವಿ ಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳು ಬೇಸ್ ಲೆಸ್ ಟ್ವೀಟ್ ಮಾಡಿದ್ದಾರೆ. ನಾನು ಸಂತೋಷ್ ಜೊತೆ ಮಾತಾಡಿದೆ ಅವರು ಅಲ್ಲಿ ಇರಲಿಲ್ಲ ಎಂದರು.
ಮುಖ್ಯಮಂತ್ರಿಗಳೇ ಈಗಾಗಲೇ ಬಹುಮತ ಕಳೆದುಕೊಂಡಿದ್ದೀರಿ. ರಾಜೀನಾಮೆ ಕೊಟ್ಟು ಮನೆಗೆ ಹೊರಡಿ. ಅಧಿಕಾರ ದುರುಪಯೋಗ ಮಾಡಿಕೊಳ್ಳಬೇಡಿ. ಶಾಸಕರ ರಕ್ಷಣೆಗೆ ಸ್ಪೀಕರ್ ಧಾವಿಸಬೇಕು ಮತ್ತು ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದರು.