ಹಿಮಾಚಲ ಪ್ರದೇಶದ ಸೊಲಾನ್ ಜಿಲ್ಲೆಯ ಕುಮಾರಹಟ್ಟಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ನಿನ್ನೆ ಸಂಭವಿಸಿದ ಬಹುಮಹಡಿಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮೃತರ ಪೈಕಿ ಸೇನಾಪಡೆಯ 13 ಸಿಬ್ಬಂದಿ ಹಾಗೂ ಒಬ್ಬ ನಾಗರಿಕ ಸೇರಿದ್ದಾರೆ. ಗಾಯಗೊಂಡವರ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಯಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪಾರು ಮಾಡಲು ಬಿರುಸಿನ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇದುವರೆಗು 17 ಸೇನಾ ಸಿಬ್ಬಂದಿ ಮತ್ತು 11 ಮಂದಿ ನಾಗರಿಕರು ಸೇರಿದಂತೆ ಒಟ್ಟು 28 ಜನರನ್ನು ರಕ್ಷಿಸಲಾಗಿದೆ. ಮುಖ್ಯಮಂತ್ರಿ ಜಯರಾಮ್ ಠಾಕೂರ್ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದರು. ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಈಗಾಗಲೇ ಆದೇಶಿಸಲಾಗಿದೆ, ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಶಿಕ್ಷಿಸಲಾಗುವುದು ಎಂದರು. ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿ ಒಂದು ಹೋಟೆಲ್ ಸೇರಿದೆ. ಭಾರಿ ಮಳೆಯ ಕಾರಣ 30 ಮಂದಿ ಸೇನಾ ಯೋಧರು ಸೇರಿದಂತೆ 42 ಮಂದಿ ಅವಘಡ ಸಂಭವಸಿದಾಗ ಹೋಟೆಲ್ನಲ್ಲಿ ಇದ್ದರು ಎಂದು ವರದಿಯಾಗಿದೆ.