ನವದೆಹಲಿ : ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲ್ಕೋಟ್ ಮೇಲೆ ಏರ್ಸ್ಟ್ರೈಕ್ ನಡೆಸಿದ ನಂತರ ಉಭಯ ದೇಶಗಳ ಸಂಬಂಧ ಹದೆಗೆಟ್ಟಿತ್ತು. ಅಲ್ಲದೆ, ಪಾಕ್ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳು ಹಾರಾಟ ನಡೆಸುವುದಕ್ಕೆ ನಿಷೇಧ ಹೇರಲಾಗಿತ್ತು. ಈಗ ಪಾಕ್ ಈ ನಿಷೇಧವನ್ನು ಹಿಂಪಡೆದಿದೆ.
ಅಮೆರಿಕ ಹಾಗೂ ಯುರೋಪ್ಗೆ ತೆರಳುವಾಗ ಭಾರತದ ವಿಮಾನಗಳು ಪಾಕಿಸ್ತಾನ ಮಾರ್ಗವನ್ನು ಬಳಸಬೇಕಿತ್ತು. ನಿಷೇಧದ ನಂತರ ಬೇರೆ ಮಾರ್ಗಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿತ್ತು. ಇದರಿಂದ ಏರ್ ಇಂಡಿಯಾಗೆ 491 ಕೋಟಿ ರೂ. ನಷ್ಟ ಉಂಟಾಗಿತ್ತು.
“ಪಾಕಿಸ್ತಾನ ವಾಯುಪ್ರದೇಶಗಳ ಮೇಲೆ ಭಾರತೀಯ ನಾಗರಿಕ ವಿಮಾನಗಳಿಗೆ ಹೇರಿದ್ದ ನಿಷೇಧವನ್ನು ತೆಗೆಯಲಾಗಿದೆ. ಹಾಗಾಗಿ ಭಾರತೀಯ ವಿಮಾನಗಳು ಶೀಘ್ರವೇ ಸಾಮಾನ್ಯ ಮಾರ್ಗ ಬಳಕೆ ಮಾಡಲಿವೆ,” ಎಂದು ಮೂಲಗಳು ತಿಳಿಸಿವೆ.
ಪಾಕ್ ಉಗ್ರರು ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಪುಲ್ವಾದಲ್ಲಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ್ದ ಭಾರತ ಉಗ್ರರು ಅಡಗಿದ್ದ ಬಾಲ್ಕೋಟ್ ಮೇಲೆ ಏರ್ಸ್ಟ್ರೈಕ್ ನಡೆಸಿತ್ತು. ಈ ಬೆಳವಣಿಗೆಯಿಂದಾಗಿ ಉಭಯ ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟಿತ್ತು.