ಬೆಂಗಳೂರು: ದೋಸ್ತಿ ರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಇಂದು ಮೈತ್ರಿ ದಿಗ್ಗಜರು ಮುಂಬೈಗೆ ತೆರಳಲಿದ್ದರು. ಆದರೆ ಈ ಬಗ್ಗೆ ಅಲ್ಲಿನ ಪೊಲೀಸರಿಗೆ ಅತೃಪ್ತರು ದೂರು ನೀಡಿದ ಬೆನ್ನಲ್ಲೇ ಇದೀಗ ದೋಸ್ತಿ ನಾಯಕರು ಯೂಟರ್ನ್ ಹೊಡೆದಿದ್ದಾರೆ.
ಹೌದು. ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಎಐಸಿಸಿ ಮುಖಂಡರಾದ ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ ಮುಂಬೈಗೆ ತೆರಳಿ ಅಲ್ಲಿನ ರೆನೈಸಾನ್ಸ್ ಹೋಟೆಲಿನಲ್ಲಿ ತಂಗಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವ ನಿರ್ಧಾರ ಮಾಡಿದ್ದರು. ಆದರೆ ಈ ವಿಚಾರ ತಿಳಿದ ಅತೃಪ್ತರು ರಕ್ಷಣೆ ಕೋರಿ ಮುಂಬೈ ಪೊಲೀಸ್ ಕಮಿಷನರ್ ಮೊರೆ ಹೋಗಿದ್ದಾರೆ. ಈ ಬೆನ್ನಲ್ಲೇ ಮುಂಬೈಗೆ ಹೋಗದಿರಲು ದೋಸ್ತಿ ದಿಗ್ಗಜರು ನಿರ್ಣಯ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಮೂಲಕ ದೋಸ್ತಿ ಸರ್ಕಾರ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವೂ ಫೇಲ್ ಆಗಿದೆ. ಆದರೆ ದೋಸ್ತಿ ನಾಯಕರು ಮುಂಬೈಗೆ ತೆರಳುತ್ತಿದ್ದರೆ ಮತ್ತೊಂದು ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು. ಈ ಮೊದಲು ಸಚಿವ ಡಿಕೆ ಶಿವಕುಮಾರ್ ಅವರು ಅತೃಪ್ತರನ್ನು ಮನವೊಲಿಸಲು ಮುಂಬೈಗೆ ತೆರಳಿದ್ದರು. ಈ ವಿಚಾರವನ್ನು ತಿಳಿದ ಅತೃಪ್ತರು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ರೆನೈಸಾನ್ಸ್ ಹೋಟೆಲ್ ಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಕೆಶಿ ಮುಂಬೈ ತಲುಪಿದ್ದರೂ ಹೋಟೆಲ್ ಮುಂಭಾಗದಲ್ಲಿ, ಮಳೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರು. ಹೋಟೆಲ್ ಒಳಗಡೆ ಬಿಡುವವರೆಗೂ ನಾನು ಇಲ್ಲೇ ಇರುತ್ತೇನೆ ಎಂದು ಪಟ್ಟು ಹಿಡಿದಿದ್ದರು.
ಕೊನೆಗೆ ಹಠ ಬಿಡದ ಡಿಕೆಶಿಯನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಮೂಲಕ ಅಲ್ಲಿ ಭಾರೀ ಹೈಡ್ರಾಮವೇ ನಡೆದಿತ್ತು.