ಅತೃಪ್ತ ಶಾಸಕರನ್ನು ನಂಬಿದರೆ ಪಕ್ಷಕ್ಕೆ ಹಾನಿ

ಬೆಂಗಳೂರು, ಜು.15- ಕೆಲವರು ತಿಂಡಿ ಇಲ್ಲಿ ತಿಂತಾರೆ, ಮುಂಬೈಗೆ ಹೋಗಿ ಊಟ ಮಾಡ್ತಾರೆ. ರಾತ್ರಿ ಎಲ್ಲಿಗೆ ಹೋಗ್ತಾರೆ ಎಂದು ಪ್ರಶ್ನಿಸುವ ಮೂಲಕ ಇಂದು ನಡೆದ ಕಾಂಗ್ರೆಸ್‍ನ ಶಾಸಕಾಂಗ ಸಭೆಯಲ್ಲಿ ಅತೃಪ್ತ ಶಾಸಕರ ಚಟುವಟಿಕೆಗಳಿಗೆ ಇತರೆ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಂತಹವರನ್ನು ನಂಬಿದರೆ ಪಕ್ಷಕ್ಕೆ ಹಾನಿ. ಮುಂದಿನ ದಿನಗಳಲ್ಲಿ ಪಕ್ಷದ ಮಾನ-ಮರ್ಯಾದೆಯನ್ನು ಕಳೆಯುತ್ತಾರೆ. ಈಗಾಗಲೇ ಇಂತಹ ಶಾಸಕರ ಆಟಗಳಿಂದ ಪಕ್ಷಕ್ಕೆ ಸಾಕಷ್ಟು ತೊಂದರೆಗಳಾಗಿವೆ. ಇತಂಹ ಶಾಸಕರನ್ನು ಪಕ್ಷದಿಂದ ಕೈಬಿಟ್ಟು ಅನರ್ಹಗೊಳಿಸಬೇಕೆಂದು ಎಂದು ಒತ್ತಾಯಿಸಿದರು.

ಇವರ ನಡವಳಿಕೆಗಳಿಂದ ರಾಜಕೀಯ ಸಮಸ್ಯೆ ಎದುರಾಗಿದೆ. ಕ್ಷೇತ್ರಗಳಲ್ಲಿ ಅವಮಾನ ಅನುಭವಿಸುವಂತಾಗಿದೆ. ಎಂಎಲ್‍ಎ ಮಾರಾಟಕ್ಕಿದ್ದಾರೆ ಎಂದು ಕೆಲವರು, ಮತ್ತೆ ಕೆಲವರು ಸರ್ಕಾರ ಉಳಿಯಲ್ಲಾ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಏನೇ ಅಸಮಾಧಾನವಿದ್ದರೂ ಬಗೆಹರಿಸಿಕೊಳ್ಳಬಹುದು. ಆದರೆ, ಪಕ್ಷ ಅಥವಾ ಜನರಿಗೆ ಹೆದರದೆ ಆಟವಾಡುತ್ತಿರುವ ಇಂತಹವರನ್ನು ಪಕ್ಷದಲ್ಲಿ ಉಳಿಸಿಕೊಂಡರೆ ಹಾನಿ ನಮಗೇ ಹೆಚ್ಚು. ಜತೆಗೆ ಮುಂದೆಯೂ ಅವರು ನಿಯತ್ತಾಗಿ ಇರುವುದಿಲ್ಲ ಎಂದು ಕಿಡಿಕಾರಿದರು.

ಈಗಾಗಲೇ ರಾಜೀನಾಮೆಗೆ ಮುಂದಾಗಿರುವ ಶಾಸಕರ ವಿರುದ್ಧ ಕ್ರಮ ವಹಿಸಲು ಎಲ್ಲಾ ಅವಕಾಶಗಳಿವೆ. ಬಿಜೆಪಿ ಕಾನೂನು ತಂತ್ರ ಹೇಳಿದರೂ ಪಕ್ಷಾಂತರ ನಿಷೇಧ ಕಾಯ್ದೆ ನಮ್ಮ ಕಡೆ ಇದೆ. ಹಾಗಾಗಿ ಅವರನ್ನು ಅನರ್ಹಗೊಳಿಸಿ ಎಂದು ಒತ್ತಾಯ ತಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ