ಬೆಂಗಳೂರು, ಜು.14- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇನೆ ಎಂದು ನಾಟಕವಾಡುವ ಬದಲು ಗೌರವದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಬೇಕೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಯಲಹಂಕದ ರಮಡಾ ರೆಸಾರ್ಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 16 ಶಾಸಕರು ರಾಜೀನಾಮೆ ನೀಡಿದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದಿದ್ದಾರೆ. ಈಗಾಗಲೇ ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ವಿಶ್ವಾಸ ಮತಯಾಚನೆಯ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಯಾವ ಕಾರಣಕ್ಕಾಗಿ ಅವರು ಇನ್ನೂ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಭಿನ್ನಮತೀಯ ಶಾಸಕರು ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.ರಾಜೀನಾಮೆ ನೀಡಿರುವವರಲ್ಲಿ ರಾಮಲಿಂಗಾರೆಡ್ಡಿ ಹೊರತು ಪಡಿಸಿ ಉಳಿದ 15 ಮಂದಿ ಶಾಸಕರು ತಕ್ಷಣವೇ ವಿಧಾನಸಭೆ ಸ್ಪೀಕರ್ ರಾಜೀನಾಮೆ ಅಂಗೀಕರಿಸುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇವೆಲ್ಲವೂ ಮುಖ್ಯಮಂತ್ರಿಗಳ ಗಮನಕ್ಕೆ ಕಾಣುತ್ತಿಲ್ಲವೆ ಎಂದು ಟೀಕಿಸಿದರು.
ಶಾಸಕರ್ಯಾರೂ ಸಣ್ಣ ಮಕ್ಕಳಲ್ಲ. ಅವರನ್ನು ಮನವೊಲಿಸುತ್ತೇನೆ ಎನ್ನುವುದು ಮುಗಿದುಹೋದ ಅಧ್ಯಾಯ. ಈಗಾಗಲೇ ತಮ್ಮ ನಿರ್ಧಾರಕ್ಕೆ ಬದ್ಧ ಎಂದು ಹೇಳಿರುವುದರಿಂದ ಕುಮಾರಸ್ವಾಮಿ ಅಧಿಕಾರದಲ್ಲಿ ಮುಂದುವರೆಯವುದರಲ್ಲಿ ಅರ್ಥವೇ ಇಲ್ಲ. ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.
ನಾವೆಲ್ಲರೂ ಸ್ವಯಂ ಪ್ರೇರಿತವಾಗಿ ಯಾವುದೇ ಒತ್ತಡಕ್ಕೂ ಮಣಿಯದೆ ರಾಜೀನಾಮೆ ನೀಡಿದ್ದೇವೆ ಎಂದು ಸ್ಪೀಕರ್‍ಗೆ ನೀಡಿರುವ ಪತ್ರದಲ್ಲಿ ಹಾಗೂ ಸುಪ್ರೀಂಕೋರ್ಟ್‍ಗೆ ಕೊಟ್ಟಿರುವ ಅಪಡೆವಿಟ್ ಪತ್ರದಲ್ಲಿ ಶಾಸಕರು ತಿಳಿಸಿದ್ದಾರೆ.
ಇಷ್ಟಾದರೂ ಸ್ಪೀಕರ್ ರಮೇಶ್‍ಕುಮಾರ್ ಅವರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೆ ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ನಮಗೆ ಸ್ಪೀಕರ್ ಬಗ್ಗೆ ಅಪಾರ ಗೌರವವಿದೆ. ಈ ಹಿಂದೆ ಅವರು ಸ್ಪೀಕರ್ ಘನತೆಯನ್ನು ಎತ್ತಿಹಿಡಿದಿದ್ದಾರೆ. ಈಗಲೂ ಕೂಡ ಅವರು ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯಬಾರದು. ಶಾಸಕರ ರಾಜೀನಾಮೆಯ ಪತ್ರವನ್ನು ಅಂಗೀಕರಿಸಿದರೆ ಉಂಟಾಗಿರುವ ಗೊಂದಲಗಳು ತನ್ನಿಂದ ತಾನೇ ಬಗೆಹರಿಯುತ್ತವೆ ಎಂದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಏನೇ ಸರ್ಕಸ್ ಮಾಡಿದರೂ ಈ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಬರಿಗಾಲಲ್ಲಿ ದೇವಸ್ಥಾನಕ್ಕೆ ಹೋದರೂ ಸರಿಯೇ ಕೈಯಲ್ಲಿ ಒಂದು ಡಜನ್ ನಿಂಬೆಹಣ್ಣು ಹಿಡಿದುಕೊಂಡರೂ ಸರಿಯೇ ಸಮ್ಮಿಶ್ರ ಸರ್ಕಾರ ಪತನವಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ. ಯಾರೊಬ್ಬರೂ ರಿವರ್ಸ್ ಆಪರೇಷನ್‍ಗೆ ಒಳಗಾಗುವುದಿಲ್ಲ. ಕೆಲವರು ಇಂತಹ ಸುಳ್ಳುಗಳನ್ನು ಹಬ್ಬಿಸುವುದರಲ್ಲಿ ನಿಸ್ಸೀಮರು.ರಾಜ್ಯದಲ್ಲಿ ಈ ಬಾರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದು ರೇಣುಕಾಚಾರ್ಯ ದೃಢವಾಗಿ ಹೇಳಿದರು.