ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ

ಬೆಂಗಳೂರು, ಜು.14-ಕಾಂಗ್ರೆಸ್-ಜೆಡಿಎಸ್‍ನಿಂದ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿರುವ ಅತೃಪ್ತ ಶಾಸಕರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದು, ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂಬ ಕೊನೆಯ ಸಂದೇಶವನ್ನು ದೋಸ್ತಿ ಪಕ್ಷದ ಮುಖಂಡರಿಗೆ ರವಾನಿಸಿದ್ದಾರೆ.

ಈಗಾಗಲೇ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವುದೇ ನಾಯಕರು ನಮ್ಮನ್ನು ಮನವೊಲಿಸುವ, ಇಲ್ಲವೇ ಸಂಧಾನ ನಡೆಸುವ ಪ್ರಯತ್ನಕ್ಕೆ ಕೈ ಹಾಕಬಾರದು. ಶಾಸಕ ಸ್ಥಾನ ಅಂಗೀಕಾರವಾದರೂ ಸರಿಯೇ, ತಿರಸ್ಕøತಗೊಂಡರೂ ಸರಿಯೇ. ಒಂದು ವೇಳೆ ಅನರ್ಹಗೊಂಡರೂ ನಾವು ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಹಾಜರಾಗುವುದಿಲ್ಲ ಎಂದು ಗಟ್ಟಿದನಿಯಲ್ಲಿ ಎಲ್ಲರೂ ಹೇಳಿದ್ದಾರೆ.

ಪ್ರಸ್ತುತ ಮುಂಬೈನಲ್ಲಿರುವ ಅತೃಪ್ತ ಶಾಸಕರು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ನಿನ್ನೆ ರಾತ್ರಿವರೆಗೂ ಗೊಂದಲಕ್ಕೆ ಸಿಲುಕಿದ್ದರು ಎನ್ನಲಾಗಿದೆ.ಹೀಗಾಗಿ ತಕ್ಷಣವೇ ಬಿಜೆಪಿ ನಾಯಕರು ಕಲಬುರ್ಗಿ ಲೋಕಸಭಾ ಸಂಸದ ಡಾ.ಉಮೇಶ್ ಜಾಧವ್ ಅವರನ್ನು ಮುಂಬೈಗೆ ಕಳುಹಿಸಿ ಶಾಸಕರ ಜತೆ ಮಾತುಕತೆ ನಡೆಸಲು ಸೂಚಿಸಿದ್ದರು.

ವರಿಷ್ಠರ ಸೂಚನೆಯಂತೆ ತಡರಾತ್ರಿಯೇ ಮುಂಬೈಗೆ ದೌಡಾಯಿಸಿದ ಡಾ.ಉಮೇಶ್‍ಜಾಧವ್ ಎಲ್ಲಾ ಶಾಸಕರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ನೀವು ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬೇಡಿ.ನಿಮ್ಮಲ್ಲಿ ವೈಮನಸ್ಸು ಸೃಷ್ಟಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಂದ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ.ನೀವಾಗಿಯೇ ಹೆದರಿ ವಾಪಸ್ ಬರಬೇಕೆಂದು ಇಂತಹ ಊಹಾಪೋಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಈವರೆಗೂ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆಸರಿಯಬೇಡಿ ಎಂದು ಮನವೊಲಿಸಿದ್ದಾರೆ.

ಬಿಜೆಪಿಗೆ ಬಂದರೆ ನಿಮಗೆ ಅನ್ಯಾಯವಾಗುವುದಿಲ್ಲ. ನಾನು ಕಾಂಗ್ರೆಸ್‍ನ ಬೆಳವಣಿಗೆಗಳಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ನಾನು ಗೆಲ್ಲುವ ಜತೆಗೆ ನನ್ನ ಮಗನೂ ಗೆದಿದ್ದಾನೆ. ಬಿಜೆಪಿ ಒಂದು ಬಾರಿ ಮಾತುಕೊಟ್ಟರೆ ಕೈ ಬಿಡುವ ಪ್ರಶ್ನೆಯೇ ಇಲ್ಲ. ನೀವು ಮನಸ್ಸನ್ನು ಬದಲಾವಣೆ ಮಾಡದೆ ಇನ್ನು ಮೂರು ದಿನಗಳವರೆಗೂ ಇದೇ ರೀತಿ ಇರಬೇಕೆಂದು ಜಾಧವ್ ಮನವಿ ಮಾಡಿದ್ದಾರೆ.

ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಸಚಿವ ಸಾ.ರಾ.ಮಹೇಶ್ ಅವರು ಕೆ.ಎಸ್.ಈಶ್ವರಪ್ಪ, ವಿ.ಮುರುಳೀಧರರಾವ್ ಭೇಟಿಯಾಗಿದ್ದು ಒಂದು ಆಕಸ್ಮಿಕ. ಅದು ಮುಖ್ಯಮಂತ್ರಿಗಳ ಕಚೇರಿಯಿಂದಲೇ ನಡೆದಿರುವ ರಾಜಕೀಯ ತಂತ್ರವಾಗಿದೆ.ಇಂತಹ ಬೆಳವಣಿಗೆಗಳು ಆದರೆ ನಿಮ್ಮನಿಮ್ಮಲ್ಲೇ ಒಡಕು ಮೂಡಿಸಿ ರಾಜಕೀಯ ಲಾಭ ಪಡೆದುಕೊಳ್ಳವ ಹುನ್ನಾರವಾಗಿದೆ.

ರಾಮಲಿಂಗಾರೆಡ್ಡಿ, ಎಂ.ಟಿ.ಬಿ.ನಾಗರಾಜ್, ಡಾ.ಕೆ. ಸುಧಾಕರ್ ಅವರನ್ನ ಮನವೊಲಿಸಿದರೆ. ಶಾಸಕರಾದ ಮುನಿರತ್ನ, ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಜತೆಗೆ ಇಬ್ಬರು ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಅವರು ವಾಪಸ್ ಬರಬಹುದೆಂಬ ಲೆಕ್ಕಾಚಾರವನ್ನು ದೋಸ್ತಿ ನಾಯಕರು ಹಾಕಿಕೊಂಡಿದ್ದಾರೆ. ಇದರ ಬಗ್ಗೆ ನೀವು ಗಮನ ಹರಿಸಬಾರದು ಎಂದು ಜಾಧವ್ ಸಲಹೆ ಮಾಡಿದ್ದಾರೆ.

ನಾನು ಕೇಂದ್ರ ವರಿಷ್ಠರ ಸೂಚನೆಯಂತೆಯೇ ಮುಂಬೈಗೆ ಬಂದಿದ್ದೇನೆ. ಒಂದು ವೇಳೆ ನಿಮ್ಮನ್ನು ಪರಿಸ್ಥಿತಿ ಕೈ ಮೀರಿ ಅನರ್ಹಗೊಳಿಸಿದರೂ ಕಾನೂನು ಹೋರಾಟಕ್ಕೂ ಬಿಜೆಪಿ ಸಜ್ಜಾಗಿದೆ.ವಾಸ್ತವವಾಗಿ ನಿಮ್ಮ ಸದಸ್ಯತ್ವವನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ನೀವೆಲ್ಲರೂ ಕಾನೂನು ಬದ್ಧವಾಗಿ ರಾಜೀನಾಮೆ ಕೊಟ್ಟಿರುವುದರಿಂದ ವಿಧಾನಸಭೆ ಸ್ಪೀಕರ್ ಅಂಗೀಕರಿಸಲೇಬೇಕು. ರಾಜ್ಯದ ಇತಿಹಾಸದಲ್ಲಿ ಈವರೆಗೂ ರಾಜೀನಾಮೆ ಪತ್ರಗಳನ್ನು ತಿರಸ್ಕರಿಸಿರುವ ನಿದರ್ಶನಗಳೇ ಇಲ್ಲ. ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ನಿಮ್ಮಪರ ವಾದ ಮಂಡಿಸುತ್ತಿರುವ ವಕೀಲ ಮುಕುಲ್ ರೊಹಟಗಿ ಅವರು ನಿಮ್ಮನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಯಾವ ಬೆಳವಣಿಗೆಗಳ ಬಗ್ಗೆಯೂ ದೃತಿಗೆಡದೆ ನಿಮ್ಮ ನಿರ್ಧಾರಕ್ಕೆ ಬದ್ಧರಾಗಬೇಕೆಂದು ಜಾಧವ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಸಕರಲ್ಲೇ ಭಿನ್ನಾಭಿಪ್ರಾಯ ಮೂಡಿಸಲು ವ್ಯವಸ್ಥಿತ ತಂತ್ರ ರೂಪಿಸುತ್ತಿದ್ದಾರೆ. ಅವರು ಏನೇ ಸರ್ಕಸ್ ನಡೆಸಲು ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ. ಮುಖಭಂಗ ತಪ್ಪಿಸಿಕೊಳ್ಳಲು ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಬುಧುವಾರದೊಳಗೆ ಎಲ್ಲಾ ಸಮಸ್ಯೆಯೂ ಇತ್ಯರ್ಥವಾಗಲಿದ್ದು, ನಿಮಗೆ ಖಂಡಿತ ನ್ಯಾಯ ಸಿಗಲಿದೆ ಎಂಬ ಆಶ್ವಾಸನೆಯನ್ನು ಜಾಧವ್ ನೀಡಿದ್ದಾರೆ ಎನ್ನಲಾಗಿದೆ.

ಹೀಗೆ ಬಿಜೆಪಿಯಿಂದ ಖಚಿತ ಭರವಸೆಗಳು ಸಿಕ್ಕ ಕಾರಣ ಮುಂಬೈನಲ್ಲಿರುವ ಶಾಸಕರೆಲ್ಲರೂ ಸಂಧಾನದ ಬಾಗಿಲು ಬಂದ್ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ಕಳುಹಿಸಿದ್ದಾರೆ.

ನಾವು ಈಗಾಗಲೇ ಬಹು ದೂರ ಸಾಗಿ ಬಂದಿದ್ದೇವೆ. ನಮ್ಮನ್ನು ಯಾರೊಬ್ಬರೂ ಮನವೊಲಿಸುವ ಪ್ರಯತ್ನ ಮಾಡಬೇಡಿ. ಮುಂದೆ ಏನಾಗಲಿದೆ ಎಂಬುದನ್ನು ಯೋಚಿಸಿಯೇ ಈ ತೀರ್ಮಾನಕ್ಕೆ ಬಂದಿದ್ದೇವೆ. ಸರ್ಕಾರದಲ್ಲಿ ನಮ್ಮನ್ನು ನಿರ್ಲಕ್ಷ್ಯ ಮಾಡಿದಾಗ ನೀವು ಯಾರೊಬ್ಬರೂ ಗಮನ ವಹಿಸಿರಲಿಲ್ಲ. ಈಗ ಮಾತುಕತೆ ಎಂದು ಬಂದರೆ ಏನು ಪ್ರಯೋಜನ ?ಬಂದ ದಾರಿಗೆ ಬಹು ದೂರ ಇರುವುದರಿಂದ ನೀವು ಎಷ್ಟೇ ಪ್ರಯತ್ನಿಸಿದರೂ ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಿನ್ನಮತಿಯರ ಈ ದೃಢ ನಿರ್ಧಾರದಿಂದ ದೋಸ್ತಿಗಳಲ್ಲಿ ಮತ್ತಷ್ಟು ತಳಮಳ ಉಂಟಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ