ಬೆಂಗಳೂರು, ಜು. 14- ಪ್ರತಿತಿಂಗಳು ಐದನೇ ತಾರೀಖು ವಾರ್ಡ್ ಕಮಿಟಿ ಸಭೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಪುರಭವನದಲ್ಲಿ ಸಿಟಿಜನ್ ಫಾರ್ ಬೆಂಗಳೂರು ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬಿಬಿಎಂಪಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಲಯ 2017ರಲ್ಲಿ ವಾರ್ಡ್ ಕಮಿಟಿ ಸಭೆ ನಡೆಸಲು ಆದೇಶ ನೀಡಿತ್ತು. ಆ ಆದೇಶದ ಪ್ರಕಾರ ಶೇ. 75 ರಿಂದ 80ರಷ್ಟು ಸಭೆಗಳು ನಡೆದಿವೆ ಎಂದು ಹೇಳಿದರು.
ವಾರ್ಡ್ ಕಮಿಟಿ ಸಭೆಗಳು ಸರಿಯಾಗಿ ನಡೆದರೆ ಉತ್ತಮ ಬೆಂಗಳೂರು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಜನರಿಂದ ಜನಪ್ರತಿನಿಧಿಗಳು ದೂರ ಉಳಿಯಬಾರದು ಎಂಬ ಉದ್ದೇಶದಿಂದ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಆದುದರಿಂದ ಪ್ರತಿ ತಿಂಗಳು 5ನೇ ತಾರೀಖು ವಾರ್ಡ್ ಕಮಿಟಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಕ್ಷಣಾರ್ಧದಲ್ಲೇ ಬಗೆಹರಿಸಬಹುದಾಗಿದೆ ಎಂದರು.
ನಂತರ ನಿ.ನ್ಯಾಯಮೂರ್ತಿ ಸಂತೋಷ್ ಹೆಗಡೆ ಮಾತನಾಡಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಜನಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. ಜನಪ್ರತಿನಿಧಿ ಆಗುವವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಸಾರ್ವಜನಿಕರ ಹಣವನ್ನು ಅವರ ಅನುಕೂಲಕ್ಕಾಗಿ ಮೀಸಲಿಡಬೇಕು.ಈ ಯಶಸ್ವಿ ಕಾರ್ಯದತ್ತ ಬಿಬಿಎಂಪಿ ಸದಸ್ಯರು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರದಲ್ಲಿ ಉತ್ತಮವಾಗಿ ವಾರ್ಡ್ ಕಮಿಟಿ ಸಭೆ ನಡೆಸಿದ 46 ಸದಸ್ಯರಿಗೆ ಕಾರ್ಪೊರೇಟ್ರ ನಂಬರ್ ಒನ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮತ್ತಿತರರ ಉಪಸ್ಥಿತರಿದ್ದರು.