ದುರ್ಬಲಗೊಂಡ ಮುಂಗಾರು

ಬೆಂಗಳೂರು, ಜು.13- ಮುಂಗಾರು ದುರ್ಬಲಗೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಮಳೆ ಕಡಿಮೆಯಾಗಲಿದೆ. ಜುಲೈ 19ರವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಅಲ್ಲಲ್ಲಿ ಚದುರಿದಂತೆ ತುಂತುರು ಇಲ್ಲವೆ ಸಾಧಾರಣ ಮಳೆಯಾಗುತ್ತಿದೆ.ಇದರಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ಅವರು ತಿಳಿಸಿದರು.
ಕಾವೇರಿ ಮತ್ತು ತುಂಗಭದ್ರ ಜಲಾನಯನ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ.ಇದರಿಂದ ಜಲಾಶಯಗಳ ಒಳ ಹರಿವು ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಜಲಾಶಯಗಳು ಸಕಾಲದಲ್ಲಿ ತುಂಬುವುದು ಕೂಡ ಅನುಮಾನವಾಗಿದೆ.ವಾತಾವರಣದಲ್ಲೂ ಉತ್ತಮ ಮಳೆಯಾಗುವ ಲಕ್ಷಣಗಳು ಸದ್ಯಕ್ಕೆ ಕಂಡುಬರುತ್ತಿಲ್ಲ. ಮತ್ತೆ ಮುಂಗಾರು ದುರ್ಬಲಗೊಳ್ಳುತ್ತಿದೆ.ಉತ್ತಮ ಮಳೆಯಾಗುತ್ತಿದ್ದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲೂ ಮಳೆ ಇಳಿಮುಖವಾಗುತ್ತಿದೆ.

ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗಬಹುದಷ್ಟೆ.ಆದರೆ, ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಹಗುರ ಮಳೆಯಾಗಬಹುದು ಅಷ್ಟೆ ಎಂದರು.

ಜುಲೈ 19ರ ನಂತರ ವಾತಾವರಣದಲ್ಲಿ ಬದಲಾವಣೆಯಾಗಲಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಕಾವೇರಿ ಜಲಾನಯನ ಭಾಗದಲ್ಲಿ ಜೂನ್ 1ರಿಂದ ಇದುವರೆಗೆ 70 ಟಿಎಂಸಿ ಅಡಿಯಷ್ಟು ನೀರು ಬರಬೇಕಿತ್ತು.ಆದರೆ, ಕೇವಲ 22 ಟಿಎಂಸಿ ಅಡಿಯಷ್ಟು ಮಾತ್ರ ನೀರು ಬಂದಿದೆ.ವಾಡಿಕೆ ಪ್ರಮಾಣದ ಅರ್ಧದಷ್ಟೂ ನೀರು ಬಂದಿಲ್ಲ. ಜುಲೈ ಅಂತ್ಯದ ವೇಳೆಗೆ ಹೆಚ್ಚು ಕಡಿಮೆ 120 ಟಿಎಂಸಿ ಅಡಿಯಷ್ಟು ನೀರು ಬರಬೇಕು.ಈಗಿರುವ ಪರಿಸ್ಥಿತಿಯಲ್ಲಿ ಹಾಗೂ ಮಳೆ ಮುನ್ಸೂಚನೆ, ಜಲಾಶಯಗಳ ಒಳ ಹರಿವು ಗಮನಿಸಿದರೆ ಅರ್ಧದಷ್ಟೂ ಕೂಡ ನೀರು ಬರುವ ಸಾಧ್ಯತೆಗಳು ಕಂಡುಬರುತ್ತಿಲ್ಲ ಎಂದು ಹೇಳಿದರು.
ಹವಾ ಮುನ್ಸೂಚನೆ ಪ್ರಕಾರ ಇನ್ನೂ ಒಂದು ವಾರ ಕಾಲ ಮಳೆಯ ಕಣ್ಣಾಮುಚ್ಚಾಲೆ ಆಟ ಮುಂದುವರಿಯುವ ಸಾಧ್ಯತೆಗಳು ಇವೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ