ಸರ್ಕಾರದ ರಕ್ಷಣೆಗೆ ರಹಸ್ಯವಾಗಿ ಕಾರ್ಯತಂತ್ರ ರೂಪಿಸುತ್ತಿರುವ ಮುಖ್ಯಮಂತ್ರಿ

ಬೆಂಗಳೂರು, ಜು.13- ವಿಧಾನಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕಿರುವ ಬಹುಮತ ಸಾಬೀತುಪಡಿಸುವ ಅಚಲ ವಿಶ್ವಾಸವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಂದಿದ್ದು, ಸರ್ಕಾರದ ರಕ್ಷಣೆಗೆ ಬೇಕಾಗಿರುವ ಕಾರ್ಯತಂತ್ರಗಳನ್ನು ರಹಸ್ಯವಾಗಿ ರೂಪಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ಪ್ರಯತ್ನವನ್ನು ಕೂಡ ಮುಂದುವರಿಸಿದ್ದಾರೆ.

ಈ ನಡುವೆ ಮತ್ತೆ ಆಪರೇಷನ್ ಕಮಲಕ್ಕೆ ಶಾಸಕರು ಒಳಗಾಗದಂತೆ ಹಾಗೂ ರಾಜೀನಾಮೆ ನೀಡದಂತೆ ಜೆಡಿಎಸ್ ಶಾಸಕರನ್ನು ಒಂದೆಡೆ ಸೇರಿಸಿ ಒಗ್ಗಟ್ಟಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ.ಮತ್ತೊಂದೆಡೆ ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಲಾಗುತ್ತಿದೆ.ಈ ಕಾರ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು ಸತತ ಪ್ರಯತ್ನ ಮಾಡುತ್ತಿದ್ದಾರೆ.

ಈಗಾಗಲೇ ವಿಧಾನಸಭೆಯಲ್ಲಿ ಕುಮಾರಸ್ವಾಮಿ ಅವರು ವಿಶ್ವಾಸಮತ ಕೋರಲು ಸಮಯ ನಿಗದಿಪಡಿಸುವಂತೆ ವಿಧಾನಸಭಾಧ್ಯಕ್ಷರನ್ನು ಕೋರಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ಅಲ್ಲಿಯವರೆಗೂ ನಾಲ್ಕು ದಿನಗಳ ಕಾಲಾವಕಾಶವಿದ್ದು, ಅಷ್ಟರಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಬೇಕಾದ ಕಾರ್ಯತಂತ್ರ ರೂಪಿಸಲಿದ್ದಾರೆ.

ವಿಶ್ವಾಸಮತ ಸಾಬೀತುಪಡಿಸುವ ದೃಢ ನಿಲುವು ಹೊಂದಿರುವ ಮುಖ್ಯಮಂತ್ರಿ ಯಾವ ರೀತಿಯಲ್ಲಿ ಶಾಸಕರ ವಿಶ್ವಾಸ ಗಳಿಸಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಾಗುತ್ತದೆ ಎಂಬ ಗುಟ್ಟನ್ನು ಮಾತ್ರ ಇದುವರೆಗೂ ಬಿಟ್ಟುಕೊಟ್ಟಿಲ್ಲ. ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ನಿರಂತರವಾಗಿ ಸಲಹೆ, ಮಾರ್ಗದರ್ಶನ ಪಡೆದು ಮೈತ್ರಿ ಸರ್ಕಾರದ ಉಳಿವಿಗೆ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆಡಳಿತ ಪಕ್ಷಗಳ ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನಗಳು ಇದುವರೆಗೂ ಫಲ ಕೊಟ್ಟಂತೆ ಕಂಡುಬಂದಿಲ್ಲ. ಅವರು ತಮ್ಮ ನಿಲುವಿಗೆ ಅಂಟಿಕೊಂಡಿದ್ದು, ಮಣಿಯುವ ಸ್ಥಿತಿಯಲ್ಲೂ ಇಲ್ಲ. ಇಂತಹ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ವಿಶ್ವಾಸಮತ ಸಾಬೀತಿಗೆ ಯಾವ ದಾಳ ಉರುಳಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ