ಬೆಂಗಳೂರು, ಜು.13- ಆಪರೇಷನ್ ಕಮಲದ ಭೀತಿಯಿಂದ ರೆಸಾರ್ಟ್ನಲ್ಲಿ ಬೀಡುಬಿಟ್ಟಿರುವ ಜೆಡಿಎಸ್ ಶಾಸಕರು ಸೋಮವಾರದವರೆಗೂ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಕಳೆದ ಐದು ದಿನಗಳ ಹಿಂದೆ ರೆಸಾರ್ಟ್ಗೆ ತೆರಳಿದ್ದ ಶಾಸಕರು ನಿನ್ನೆ ಪ್ರಾರಂಭವಾದ ಮಳೆಗಾಲದ ಅಧಿವೇಶನಕ್ಕೆ ರೆಸಾರ್ಟ್ನಿಂದಲೇ ಒಟ್ಟಾಗಿ ಬಸ್ನಲ್ಲಿ ಆಗಮಿಸಿದ್ದರು.
ಅಧಿವೇಶನ ಮುಗಿದ ನಂತರ ಮತ್ತೆ ಬಸ್ನಲ್ಲೇ ದೇವನಹಳ್ಳಿ ಬಳಿ ಇರುವ ರೆಸಾರ್ಟ್ಗೆ ತೆರಳಿ ಅಲ್ಲೇ ಠಿಕಾಣಿ ಹೂಡಿದ್ದಾರೆ.ಯೋಗ, ಧ್ಯಾನ ಮಾಡುವುದಲ್ಲದೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಪರಸ್ಪರ ಸಮಾಲೋಚನೆಯಲ್ಲಿ ತೊಡಗಿದ್ದಾರೆಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವವರೆಗೂ ಒಗ್ಗಟ್ಟನ್ನು ಮುಂದುವರಿಸಿಕೊಂಡು ಹೋಗಲು ಪಕ್ಷದ ವರಿಷ್ಠರು ನಿರ್ದೇಶನ ನೀಡಿದ್ದಾರೆ. ಅದರಂತೆ ಶಾಸಕರು ಬಿಜೆಪಿ ಮುಖಂಡರ ಸಂಪರ್ಕಕ್ಕೆ ಸಿಗದಂತೆ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದಾರೆ.
ತೂಗುಯ್ಯಾಲೆಯಲ್ಲಿರುವ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳ ಮಾಹಿತಿಯನ್ನು ಕುಮಾರಸ್ವಾಮಿ ಅವರು ಶಾಸಕರಿಗೆ ನೀಡುತ್ತಿದ್ದಾರೆ ಎನ್ನಲಾಗಿದೆ.
ವಿಶ್ವಾಸಮತ ಸಾಬೀತುಪಡಿಸುವ ಅಚಲ ವಿಶ್ವಾಸವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದ್ದು, ಇಂದು ಸಂಜೆ ರೆಸಾರ್ಟ್ಗೆ ತೆರಳಿ ಶಾಸಕರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಪಕ್ಷದ ಶಾಸಕರ ಮನವೊಲಿಸುವ ಪ್ರಯತ್ನಗಳನ್ನು ಮುಂದುವರಿಸಲಾಗಿದೆ.ರಾಜಕೀಯ ಪರಿಸ್ಥಿತಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಲು ಜೆಡಿಎಸ್ ನಿರ್ಧರಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.