ರೆಸಾರ್ಟ್ ವಾಸ್ತವ್ಯಕ್ಕೆ ಕಾಂಗ್ರೇಸ್ ಶಾಸಕರಿಂದ ನೀರಸ ಪ್ರತಿಕ್ರಿಯೆ

ಬೆಂಗಳೂರು, ಜು.13- ರೆಸಾರ್ಟ್ ವಾಸ್ತವ್ಯಕ್ಕೆ ಕಾಂಗ್ರೆಸ್ ಶಾಸಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹಳಷ್ಟು ಮಂದಿ ರೆಸಾರ್ಟ್‍ನಿಂದ ದೂರ ಉಳಿದಿದ್ದಾರೆ.

ಬಿಜೆಪಿಯ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಮೂರು ದಿನಗಳ ಹಿಂದೆಯೇ ರೆಸಾರ್ಟ್ ವಾಸ್ತವ್ಯ ಆರಂಭಿಸಿತ್ತು.ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವ ನಿಲುವನ್ನು ಪ್ರಕಟಿಸಿದ ಬಳಿಕ ರಾಜಕೀಯ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಇತ್ತ ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಕೂಡ ತಮ್ಮ ಶಾಸಕರನ್ನು ಪಂಚತಾರಾ ಹೋಟೆಲ್‍ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಿ ಬೀಡುಬಿಟ್ಟಿರುವ ಶಾಸಕರ ಸಂಖ್ಯೆ ಸುಮಾರು 40ನ್ನೂ ದಾಟಿಲ್ಲ ಎಂದು ಹೇಳಲಾಗಿದೆ.
ಈಗಾಗಲೇ ಕಾಂಗ್ರೆಸ್‍ನ 13 ಮಂದಿ ರಾಜೀನಾಮೆ ನೀಡಿದ್ದು, ಅದರಲ್ಲಿ 8 ಮಂದಿ ಮುಂಬೈನ ಹೋಟೆಲ್‍ನಲ್ಲಿ ತಂಗಿದ್ದಾರೆ. ಇನ್ನು ಹೊರಗಡೆ ಉಳಿದುಕೊಂಡಿರುವ ರಾಮಲಿಂಗಾರೆಡ್ಡಿ, ಎಂ.ಟಿ.ಬಿ.ನಾಗರಾಜ್, ಸುಧಾಕರ್, ರೋಷನ್‍ಬೇಗ್ ಮತ್ತು ಆನಂದ್‍ಸಿಂಗ್ ಅವರನ್ನು ಕಾಂಗ್ರೆಸ್ ನಾಯಕರು ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಆದರೆ, ಬಹಳಷ್ಟು ಮಂದಿ ಶಾಸಕರು ಹೋಟೆಲ್‍ಗೆ ಆಗಮಿಸಲು ಹಿಂದೇಟು ಹಾಕಿದ್ದು, ನಾವು ಪಕ್ಷಕ್ಕೆ ನಿಷ್ಠರಾಗಿರುತ್ತೇವೆ. ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡಿ. ಹೋಟೆಲ್‍ನಲ್ಲಿ ಬಂಧಿಸಿಡುವ ಅಗತ್ಯವಿಲ್ಲ. ನೀವು ಯಾವಾಗ ಸಭೆ ಕರೆದರೂ ನಾವು ಬರಲು ಸಿದ್ಧ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಕಾಂಗ್ರೆಸ್ ಶಾಸಕರು ಹೋಟೆಲ್‍ಗೆ ಬರದೇ ಇರುವುದರಿಂದ ಗಲಿಬಿಲಿಗೊಳಗಾಗಿರುವ ಕಾಂಗ್ರೆಸ್ ನಾಯಕರು ಇಂದು ಸಂಜೆ ಶಾಸಕರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಸೂಚನೆ ರವಾನಿಸಲಾಗಿದೆ.

ಶಾಸಕ ಎಂ.ಟಿ.ಬಿ.ನಾಗರಾಜ್, ಸುಧಾಕರ್, ಆನಂದ್‍ಸಿಂಗ್, ರಾಮಲಿಂಗಾರೆಡ್ಡಿ ಅವರುಗಳ ಮನವೊಲಿಸಿ ಸಭೆಗೆ ಕರೆತರುವ ಪ್ರಯತ್ನ ನಡೆದಿದೆ. ಒಂದು ವೇಳೆ ಈ ನಾಲ್ಕು ಮಂದಿ ಶಾಸಕರು ಸಭೆಯಲ್ಲಿ ಭಾಗವಹಿಸಿದರೆ.ರಾಮಲಿಂಗಾರೆಡ್ಡಿ ಅವರ ಸಲಹೆ ಮೇರೆಗೆ ರೋಷನ್‍ಬೇಗ್ ಕೂಡ ತಮ್ಮ ರಾಜೀನಾಮೆಯನ್ನು ಹಿಂಪಡೆದು ಪಕ್ಷಕ್ಕೆ ಬೆಂಬಲ ಮುಂದುವರೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ಬೆಳವಣಿಗೆ ಸಾಧ್ಯವಾದರೆ ಆನಂದ್‍ಸಿಂಗ್ ಮತ್ತು ಬೆಂಗಳೂರಿನ ಮೂವರು ಶಾಸಕರು ಸೋಮವಾರ ಅಧಿವೇಶನದಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.
ಆದರೆ, ಪ್ರಸ್ತುತ ಸಂಧಾನ ಪ್ರಕ್ರಿಯೆಗಳು ಮುಂದುವರೆದಿದ್ದು, ನಾಳೆ ಸಂಜೆಯೊಳಗಾಗಿ ಸ್ಪಷ್ಟ ಚಿತ್ರಣ ಪಡೆಯಲಿದೆ.ಸದ್ಯದ ಪರಿಸ್ಥಿತಿಯಲ್ಲಿ ಗೊರಗುಂಟೆಪಾಳ್ಯದ ತಾಜ್‍ದಿಗಂತಾದಲ್ಲಿ ತಂಗಿರುವ ಶಾಸಕರ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಮೈತ್ರಿ ಸರ್ಕಾರದ ಪಾಲಿಗೆ ಇದು ಆಶಾದಾಯಕವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ