ಗುವಾಹಟಿ: ಅಸ್ಸಾ, ಪಶ್ಚಿಮ ಬಂಗಾಳ, ಮಿಜೋರಾಂನಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಉಂಟಾಗಿದೆ. ಅಸ್ಸಾಂನಲ್ಲಿ ಪ್ರವಾಹದ ಮಟ್ಟದಲ್ಲಿ ಏರಿಕೆಯಾಗಿದ್ದು, 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು4 ಲಕ್ಷ ಮಂದಿ ಪೀಡಿತರಾಗಿದ್ದು, ಮೂವರು ಪ್ರಾಣಕಳೆದು ಕೊಂಡಿದ್ದಾರೆ.
ಹಲವೆಡೆ ಭೂಕುಸಿತಗಳು ಸಂಭವಿಸಿದ್ದು, ಮನೆಗಳು ನೆರೆಯಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ವರದಿಯಾಗಿದೆ. ಅಪಾರ ಪ್ರಮಾಣದ ಕೃಷಿ ಭೂಮಿ ಜಲಾವೃತವಾಗಿದ್ದು ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಳೆ ಮುಂದುವರಿದಲ್ಲಿ ಅಪಾಯ ಮಟ್ಟವನ್ನು ಮೀರಲಿದೆ ಎಂದು ಒಳನಾಡು ಜಲಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂನ ಹೆಚ್ಚಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಲವು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಧೀಮಾಜಿ, ಲಖೀಮ್‌ಪುರ್,ಬಿಸ್ವನಾಥ್, ಜೊರ್‌ಹಾಟ್, ದರ್‌ರಾಂಗ್, ಬಾರ್‌ಪೇಟಾ, ನಲ್‌ಬಾರಿ, ಮಾಜುಲಿ, ಚಿರಾಂಗ್, ದಿಬ್ರುಗಡ ಮತ್ತುಗೋಲ್ ಗಾಟ್ ಜಿಲ್ಲೆಗಳು ನೆರೆ ಪೀಡಿತವಾಗಿದೆ.
13 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶನಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದೆ. ಮಳೆ ಮುಂದುವರಿದಿದ್ದು ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಕಾಝಿರಂಗ ರಾಷ್ಟ್ರೀಯ ಉದ್ಯಾನವನಕ್ಕೂ ನೀರು ನುಗ್ಗಿದ್ದು, ಪ್ರಾಣಿಗಳು ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ.
ಮಿಜೋರಾಂನಲ್ಲೂ ಹಲವು ತಗ್ಗು ಪ್ರದೇಶಗಳು ನೆರೆ ಪೀಡಿತವಾಗಿದೆ.
ಸಿಕ್ಕಿಂ , ಪಶ್ಚಿಮ ಬಂಗಾಳದಲ್ಲೂ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಡಾರ್ಜಲಿಂಗ್ -ಸಿಕ್ಕಿಂ ಸಂಪರ್ಕಿಸುವ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದ್ದು ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.