ಸುಪ್ರೀಂನಲ್ಲಿಂದು ಶಾಸಕಾಂಗ Vs ನ್ಯಾಯಾಂಗ: ಕೋರ್ಟ್ ಆದೇಶದ ಮೇಲೆ ದೋಸ್ತಿ ಭವಿಷ್ಯ

ನವದೆಹಲಿ: ಸಮ್ಮಿಶ್ರ ಸರ್ಕಾರದ ಶಾಸಕರ ರಾಜೀನಾಮೆ ವಿಚಾರ ಸುಪ್ರೀಂ ಅಂಗಳಕ್ಕೆ ತಲುಪಿದ್ದು, ಇಂದು ಸುಪ್ರೀಂಕೋರ್ಟ್ ನಲ್ಲಿ ಶಾಸಕಾಂಗ ವರ್ಸಸ್ ನ್ಯಾಯಾಂಗದ ವಾದ-ವಿವಾದಗಳು ನಡೆಯಲಿದೆ.

ರಾಜೀನಾಮೆ ಅಂಗೀಕಾರ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಸುಪ್ರೀಂ ಮೊರೆಹೋಗಿದ್ದು, ಗುರುವಾರ ವಿಚಾರಣೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಹೀಗಾಗಿ ಸುಪ್ರೀಂ ನಿರ್ದೇಶನದಂತೆ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಇಂದಿನ ಅತೃಪ್ತ ಶಾಸಕರ ಕೇಸ್ ಹೊಸ ತೀರ್ಪಿಗೆ ನಾಂದಿಯಾಗುತ್ತಾ ಎಂಬುದನ್ನು ಕಾದು ನೋಡಬೇಕು.

ಸುಪ್ರೀಂಕೋರ್ಟ್ ಮುಂದೆ ಸ್ಪೀಕರ್ ವಾದ:
ನಿಮ್ಮ ಸೂಚನೆಯಂತೆ 10 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ನಿಯಮದಂತೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ನಿನ್ನೆ ಸಂಜೆಯ ಎಲ್ಲ ಬೆಳವಣಿಗೆಯ ವಿಡಿಯೋ ರೆಕಾರ್ಡ್ ಮಾಡಿ ಕೋರ್ಟ್ ಗೆ ಒಪ್ಪಿಸಿದೆ. ಶಾಸಕರ ರಾಜೀನಾಮೆ ಆಧರಿಸಿ ವಿಚಾರಣೆ ನಡೆಸಬೇಕು. ವಿಚಾರಣೆ ನಡೆಸದೇ ತಕ್ಷಣ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿಪಡಿಸಿ ಶಾಸಕರ ವಿಚಾರಣೆ ನಡೆಸಿ ಕ್ರಮ ಕೈಕೊಳ್ಳುವೆ. ಸಂವಿಧಾನದ ನಿಯಮ ಪ್ರಕಾರ ನಿಗದಿತ ಸಮಯದಲ್ಲಿ ರಾಜೀನಾಮೆ ಅಂಗೀಕರಿಸುವಂತೆ ನೀವು ಸೂಚಿಸುವಂತಿಲ್ಲ ಎಂದು ಸ್ಪೀಕರ್ ಹೇಳಬಹುದು.

ರಾಜೀನಾಮೆ ಅಂಗೀಕಾರಕ್ಕೆ ಎಷ್ಟು ದಿನಾವಾದರೂ ಸಮಯ ಹಿಡಿಯಬಹುದು. ಕರ್ನಾಟಕದಲ್ಲಿ ರಾಜಕೀಯ ಸ್ಥಿತ್ಯಂತರಗಳಿಂದ ಈ ರಾಜೀನಾಮೆಗಳು ಮಹತ್ವ ಪಡೆದುಕೊಂಡಿದೆ. ಈ ರೀತಿಯ ಪ್ರಕರಣಗಳು ದೇಶದಲ್ಲಿ ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಪ್ರಕರಣ ನಡೆದಿವೆ. ರಾಜೀನಾಮೆ ಅಂಗೀಕಾರಕ್ಕೆ ನಾನು ತಡಮಾಡಿರಲಿಲ್ಲ. ಜುಲೈ 6 ಶನಿವಾರ ರಾಜೀನಾಮೆ ಸಲ್ಲಿಕೆಯಾಗಿದೆ. ಭಾನುವಾರ ರಜೆ, ಸೋಮವಾರ ಪೂರ್ವ ನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಾನು ರಜೆಯಲ್ಲಿದ್ದೆ. ಮಂಗಳವಾರ ರಾಜೀನಾಮೆ ಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆಸಿದ್ದೇನೆ. ಮುಂದೆಯೂ ಸಂವಿಧಾನದ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಸ್ಪೀಕರ್ ಇಂದು ವಾದ ಮಂಡಿಸುವ ಸಾಧ್ಯತೆಗಳಿವೆ.

ರೆಬಲ್ ಶಾಸಕರ ವಾದ:
ಕೋರ್ಟ್ ನಿರ್ದೇಶನದಂತೆ ನಿನ್ನೆ ಸಂಜೆ ರಾಜೀನಾಮೆ ಸಲ್ಲಿಸಿದೆ. ಸ್ಪೀಕರ್ ಮತ್ತೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ರಾಜೀನಾಮೆ ನಿಯಮಗಳ ಪ್ರಕಾರ ಪುನರ್ ಸಲ್ಲಿಕೆ ಬಳಿಕವೂ ನಿರ್ಧಾರ ತೆಗದುಕೊಂಡಿಲ್ಲ. ಆರ್ಟಿಕಲ್ 190ರ ಅನ್ವಯ ಸ್ಪೀಕರ್ ರಾಜೀನಾಮೆ ಅಂಗೀಕರಿಸುವಂತೆ ಸೂಚಿಸಬೇಕು. ಇಂದಿನಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಈಗಾಗಲೇ ಎರಡು ಪಕ್ಷದ ಶಾಸಕರಿಗೆ ವಿಪ್ ಜಾರಿಯಾಗಿದೆ. ಮುಂದೆ ಅನರ್ಹತೆ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ. ಸರ್ಕಾರದ ಒತ್ತಡ ಮೇಲೆ ಸ್ಪೀಕರ್ ಅನರ್ಹತೆ ಪ್ರಕ್ರಿಯೆ ಆರಂಭಿಸದಂತೆ ಹಾಗೂ ಶೀಘ್ರ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ ನೀಡಿ ಎಂದು ಅತೃಪ್ತ ಶಾಸಕರು ವಾದ ಮಂಡಿಸಬಹುದು ಎಂಬುದಾಗಿ ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ