ಬೆಂಗಳೂರು, ಜು.11- ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದಿರುವ ಕಾಂಗ್ರೆಸ್- ಜೆಡಿಎಸ್ ನ ಎಂಟು ಮಂದಿ ಶಾಸಕರು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಇಂದು ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಮುಂದೆ ಹಾಜರಾಗಿ ಮತ್ತೊಮ್ಮೆ ತಮ್ಮ ರಾಜೀನಾಮೆ ಸಲ್ಲಿಸಿದರು.
ಕಾಂಗ್ರೆಸ್ ನ ಶಾಸಕರಾದ ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಟಳ್ಳಿ, ಯಲ್ಲಾಪುರ ಕ್ಷೇತ್ರದ ಶಿವರಾಮ್ ಹೆಬ್ಬಾರ್, ಹಿರೇಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್, ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂ. ಕ್ಷೇತ್ರದ ಬೈರತಿ ಬಸವರಾಜ್, ರಾಜರಾಜೇಶ್ವರಿ ಕ್ಷೇತ್ರದ ಮುನಿರತ್ನ, ಜೆಡಿಎಸ್ ಶಾಸಕರಾದ ಹುಣಸೂರು ಕ್ಷೇತ್ರದ ಎಚ್.ವಿಶ್ವನಾಥ್, ಕೆ.ಆರ್.ಪೇಟೆ ಕ್ಷೇತ್ರದ ನಾರಾಯಣಗೌಡ, ಮಹಾಲಕ್ಷ್ಮೀಕ್ಷೇತ್ರದ ಗೋಪಾಲಯ್ಯ ಅವರು ಇಂದು ಮತ್ತೊಮ್ಮೆ ಖುದ್ದು ಹಾಜರಾಗಿ ತಮ್ಮ ಕೈ ಬರಹದಲ್ಲಿ ರಾಜೀನಾಮೆ ಪತ್ರಗಳನ್ನು ಸ್ಪೀಕರ್ ಗೆ ಸಲ್ಲಿಸಿದರು.
ಜುಲೈ 6 ರಂದು 13 ಮಂದಿ ಹಂತ ಹಂತವಾಗಿ ಸ್ಪೀಕರ್ ಕಚೇರಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಸ್ಪೀಕರ್ ಅವರು ಕಚೇರಿಯಲ್ಲಿ ಇರಲಿಲ್ಲ. ಸ್ಪೀಕರ್ ಅವರ ಆಪ್ತ ಕಾರ್ಯದರ್ಶಿ ಅವರಿಗೆ ನೀಡಿ ಸ್ವೀಕೃತಿ ಪಡೆದಿದ್ದರು. ಈ ಪೈಕಿ ಐದು ಮಂದಿ ರಾಜೀನಾಮೆ ಮಾತ್ರ ಕ್ರಮ ಬದ್ಧವಾಗಿದ್ದು ಉಳಿದವರ ರಾಜೀನಾಮೆ ಕ್ರಮ ಬದ್ಧವಾಗಿಲ್ಲ ಎಂದು ಸ್ಪೀಕರ್ ಘೋಷಿಸಿದರು.
ಆದಾಗ್ಯೂ ಅತೃಪ್ತರು ತಮ್ಮ ರಾಜೀನಾಮೆ ಅಂಗೀಕರಿಸುವಂತೆ ಸಲಹೆ ನೀಡುವಂತೆ ನಿನ್ನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಬೆಳಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕ್ರಮ ಬದ್ಧವಾಗಿ ರಾಜೀನಾಮೆ ನೀಡದ ಶಾಸಕರು ಖುದ್ದಾಗಿ ಸ್ಪೀಕರ್ ಅವರ ಎದುರು ಹಾಜರಾಗಿ ಖುದ್ದಾಗಿ ರಾಜೀನಾಮೆ ನೀಡುವಂತೆ ಸೂಚಿಸಿತ್ತಲ್ಲದೆ, ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ಅವರು ನಾಳೆ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡುವಂತೆ ಸೂಚಿಸಿತ್ತು.
ರಾಜೀನಾಮೆ ನೀಡುವ ಶಾಸಕರು ಸಂಜೆ 6 ಗಂಟೆಗೆ ಒಳಗೆ ಸಭಾಧ್ಯಕ್ಷರನ್ನು ಭೇಟಿ ಮಾಡುವಂತೆ ಸೂಚಿಸಿತ್ತು. ಮುಂಬೈನಲ್ಲಿ ಬೀಡು ಬಿಟ್ಟಿದ್ದ ಅತೃಪ್ತ ಶಾಸಕರು ವಿಶೇಷ ವಿಮಾನದ ಮೂಲಕ ಬೆಂಗಳರಿನ ಎಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಝಿರೋ ಟ್ರಾಫಿಕ್ ನಲ್ಲಿ ವಿಧಾನಸೌಧಕ್ಕೆ ಆಗಮಿಸುವಾಗ ಆರು ಗಂಟೆ ದಾಟಿತ್ತು, ಇದರಿಂದಾಗಿ ಶಾಸಕರು ತರಾತುರಿಯಲ್ಲಿ ವಿಮಾನದಿಂದ ಇಳಿದು ಬಸ್ ಏರಿ, ವಿಧಾನಸೌಧದಲ್ಲಿ ಬಸ್ ಇಳಿದು ಅಕ್ಷರಶಃ ಓಡುತ್ತಾ ಸ್ಪೀಕರ್ ಕಚೇರಿ ತಲುಪಿದರು. ಅದರಲ್ಲೂ ಶಾಸಕ ಬೈರತಿ ಬಸವರಾಜು ಅವರು ಒಡಿದ ರೀತಿ ಗಮನ ಸೆಳೆಯಿತು.
ರಾಜೀನಾಮೆ ಸಲ್ಲಿಸಿದ ಬಳಿಕ ಬಂದಿದ್ದ ವಿಶೇಷ ವಿಮಾನದಲ್ಲೇ ಶಾಸಕರು ಮುಂಬೈಗೆ ಮರಳಿದರು. ಶಾಸಕರು ಬೆಂಗಳೂರಿಗೆ ಬಂದು ಹೋಗಲು ಪೊಲೀಸರು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಬಿಗಿ ಬಂದೋಬಸ್ತ್ ಆಯೋಜಿಸಿದ್ದರು.
ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮನವೋಲಿಸುವ ಉದ್ದೇಶದಿಂದ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಇತರರು ವಿಧಾನಸೌಧದಲ್ಲೇ ಕಾದು ಕುಳಿತಿದ್ದರು. ಆದರೆ ನ್ಯಾಯಾಲಯದ ನಿರ್ದೇಶನದಂತೆ ಶಾಸಕರಿಗೆ ತೊಂದರೆಯಾಗದಂತೆ ರಕ್ಷಣೆ ನೀಡಬೇಕಿದೆ. ಹಾಗಾಗಿ ಅವರನ್ನು ಭೇಟಿ ಮಾಡುವ ಪ್ರಯತ್ನ ಕೈ ಬಿಡಿ ಎಂದು ಡಿಜಿಪಿ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಸಚಿವರು ತಮ್ಮ ಪಾಡಿಗೆ ತಾವು ಉಳಿದರು. ಶಾಸಕರು ಬೆಂಗಳೂರಿಗೆ ಬಂದು ರಾಜೀನಾಮೆ ನೀಡಿ ಅಷ್ಟೇ ವೇಗದಲ್ಲಿ ಮತ್ತೆ ಮುಂಬೈಗೆ ತೆರಳಿದರು.
ಬೆಂಗಳೂರು, ಜು.೧೧- ಜೆಡಿಎಸ್-ಕಾಂಗ್ರೆಸ್ನ ಎಂಟು ಮಂದಿ ಅತೃಪ್ತರು ಇಂದು ತಮ್ಮನ್ನು ಭೇಟಿ ಮಾಡಿ ನಿಗದಿತ ನಮೂನೆಯಲ್ಲಿ ನೀಡಿದ್ದಾರೆ. ಆದರೆ ಅವುಗಳ ನೈಜ್ಯತೆ ಮತ್ತು ನಿಷ್ಪಕ್ಷಪಾತತೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳದ ಹೊರತು ಅಂಗೀಕಾರ ಮಾಡುವುದು ಸಾಧ್ಯವಿಲ್ಲ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಘೋಷಿಸುವ ಮೂಲಕ ಗುಟುಕು ಜೀವ ಹಿಡಿದುಕೊಂಡಿದ್ದ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಜೀವಜಲ ನೀಡಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಎಂಟು ಮಂದಿ ಶಾಸಕರು ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ರಾಜೀನಾಮೆಯನ್ನು ಬೆಳಕಿನ ವೇಗದಲ್ಲಿ ಅಂಗೀಕಾರ ಮಾಡುವಂತಹ ತುರ್ತು ಏನಿದೆ ಎಂದು ಪ್ರಶ್ನಿಸಿದ್ದಾರೆ. ನನ್ನ ನಿರ್ಧಾರದಿಂದ ಕೆಲವರಿಗೆ ಅನುಕೂಲವಾಗಬಹುದು, ಇನ್ನೂ ಕೆಲವರಿಗೆ ಅನಾನುಕೂಲವಾಗಬಬುದು. ಆದರೆ ಈ ವಿಷಯದಲ್ಲಿ ನಾನು ಅಸಹಾಯಕ. ವಿಧಾನಮಂಡಲದ ನಡವಳಿಗಳ ಸಕ್ಷನ್ ೧೯೦ ಪ್ರಕಾರ ರಾಜೀನಾಮೆ ನೀಡಿರುವುದು ಸ್ವಯಂ ಪ್ರೇರಿತವೇ ಅಥವಾ ಯಾವುದಾರೂ ಒತ್ತಡ ಇದೇಯೇ ಎಂದು ನನಗೆ ಮನವರಿಕೆಯಾಗಬೇಕು. ಏಕಾಏಕಿ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜೀನಾಮೆಯನ್ನು ಅಂಗೀಕರಿಸಲು ವಿಳಂಬ ಮಾಡಿದ್ದೇನೆ. ಅದಕ್ಕಾಗಿ ರಾಜೀನಾಮೆ ನೀಡಿರುವ ಶಾಸಕರು ಸುಪ್ರೀಂಕೋರ್ಟ್ ಮೋರೆ ಹೋಗಿದ್ದಾರೆ ಎಂದು ವರದಿಯಾಗಿದೆ. ನಾನು ಜು.೬ರಂದು ಮಧ್ಯಾಹ್ನ ೧೨.೩೦ರವರೆಗೂ ನಾನು ವಿಧಾನಸೌಧದಲ್ಲೇ ಕುಳಿತಿದ್ದೆ. ಆ ಸಂದರ್ಭದಲ್ಲಿ ಯಾರು ನನ್ನ ಭೇಟಿಗೆ ಸಮಯ ಕೇಳಿರಲಿಲ್ಲ. ಪತ್ರ ಅಥವಾ ಫೋನ್ ಮೂಲಕವಾಗಲಿ ನನ್ನನ್ನು ಸಂಪರ್ಕಿಸಲಿಲ್ಲ. ಹಾಗಾಗಿ ನಾನು ಹೋದೆ. ಶಾಸಕರು ೨.೩೦ಕ್ಕೆ ನನ್ನ ಕಚೇರಿಗೆ ಬಂದಿದ್ದಾರೆ. ಅವರು ಕೊಟ್ಟ ರಾಜೀನಾಮೆಯನ್ನು ಕಚೇರಿಯಲ್ಲಿ ಸ್ವೀಕರಿಸಿ ಸ್ವೀಕೃತಿ ನೀಡಲಾಗಿದೆ. ಮಾರನೇ ದಿನ ಭಾನುವಾರ ರಜೆ ಇತ್ತು ಅಂದು ನಾನು ಕಚೇರಿ ತೆರೆದುಕುಳಿತುಕೊಳ್ಳಲಾಗಲ್ಲ. ಸೋಮವಾರ ನನಗೆ ವೈಯಕ್ತಿಕ ಕೆಲಸ ಇತ್ತು. ಹಾಗಾಗಿ ಮಂಗಳವಾರ ಕಚೇರಿಗೆ ಬಂದೆ ನಾಮಪತ್ರಗಳನ್ನು ಪರಿಶೀಲಿಸಿದ್ದೆ. ೧೩ ಮಂದಿಯ ರಾಜೀನಾಮೆಯಲ್ಲಿ ಐದು ಮಂದಿ ನಾಮಪತ್ರಗಳು ಕ್ರಮ ಬದ್ಧವಾಗಿದ್ದವು. ಉಳಿದ ಎಂಟು ಮಂದಿ ನಾಮಪತ್ರಗಳು ವಿಧಾನಮಂಡಲದ ನಡವಳಿಗಳ ನಿಯಮ ೨೦೨ರ ನಮೂನೆಯಲ್ಲಿ ಇರಲಿಲ್ಲ. ತಕ್ಷಣವೇ ಅಷ್ಟು ಮಂದಿ ಶಾಸಕರಿಗೆ ಮಾಹಿತಿ ನೀಡಿ, ರಾಜೀನಾಮೆ ನೀಡುವುದಾಗಿದ್ದರೆ ನಿಗದಿತ ನಮೂನೆಯಲ್ಲಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ರಾಜೀನಾಮೆ ಪತ್ರಗಳನ್ನು ಪರೀಶಿಲಿಸದೆ ನಾನು ಅಂಗೀಕರಿಸಲು ಸಾಧ್ಯವಿರಲಿಲ್ಲ. ಈ ವಾಸ್ತವ ಅರಿಯದೆ ಕೆಲವು ಪತ್ರಿಕೆಗಳು ನಾನು ವಿಳಂಬ ಮಾಡುತ್ತಿದ್ದೇನೆ ಎಂಬರ್ಥದ ವರದಿ ಮಾಡಿವೆ. ನಾನು ೪೦ ವರ್ಷ ಸಾರ್ವಜನಿಕ ಜೀವನದಲ್ಲಿದ್ದೇನೆ. ಈಗ ನನಗೆ ೭೦ ವರ್ಷ ವಯಸ್ಸು, ೧೦೦ ವರ್ಷ ಬದುಕುವ ಆಸೆಯಿಲ್ಲ. ಕನಿಷ್ಠ ಸಾಯುವ ಕೊನೆಯಲ್ಲಾದರೂ ನೆಮ್ಮದಿಯಾಗಿ ಸಾಯಲು ಬಿಡಿ. ಈ ವಯಸ್ಸಿನಲ್ಲಿ ಯಾವುದೋ ಆಸೆಗೆ ಸಿಲುಕಿದ್ದೇನೆ ಎಂಬ ಅಪನಂಬಿಕೆ ಹುಟ್ಟು ಹಾಕಬೇಕಬೇಡಿ. ನಾನು ಈ ರಾಜ್ಯದ ಜನರ ಮತ್ತು ಸಂವಿಧಾನದ ಒತ್ತಡಕ್ಕೆ ಬಾಗುತ್ತೇನೆಯೇ ಹೊರತು, ಉಳಿದ ಮೂರನೆ ಯಾವುದೇ ಶಕ್ತಿಯೂ ನನ್ನ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ನುಡಿದರು.
ಚುನಾಯಿತ ಶಾಸಕರು ನನ್ನನ್ನು ಭೇಟಿ ಮಾಡಲು ಸುಪ್ರೀಂ ಕೋರ್ಟ್ನ ಅನುಮತಿ ಬೇಕಿತ್ತಾ. ರಾಜೀನಾಮೆ ನೀಡಿದವರು ರಾಜ್ಯಪಾಲರಿಗೆ ದೂರು ನೀಡುತ್ತಾರೆ, ವಿನಾಕಾರಣ ಸುಪ್ರೀಂಕೋರ್ಟ್ಗೆ ಹೋಗುತ್ತಾರೆ. ಭಾರೀ ಪೊಲೀಸ್ ಬಂದೋಬಸ್ತ್ನಲ್ಲಿ ಬರುತ್ತಾರೆ ಇಂದು ರಾಜೀನಾಮೆ ನೀಡಿ ತಕ್ಷಣ ಅಂಗೀಕರಿಸಿ ಎಂದು ಹೇಳಿದ್ದಾರೆ. ಅದು ಸಾಧ್ಯವಿಲ್ಲ. ಕೌಲ್ ಅಂಡ್ ಶೆಟ್ಟರ್ ಹಾಗೂ ಸಂವಿಧಾನ ೧೯೦ರ ಪ್ರಕಾರ ರಾಜೀನಾಮೆ ಸ್ವಯಂ ಪ್ರೇರಿತವೇ, ಸರಿಯಾದ ಕಾರಣ ಹೊಂದಿದೇಯೇ ಎಂದು ಖಚಿತ ಪಡಿಸಿಕೊಳ್ಳಬೇಕಿದೆ. ರಾತ್ರಿಯೇಲ್ಲಾ ಕುಳಿತು ಯೋಚಿಸುತ್ತೇನೆ. ಸುಪ್ರೀಂಕೋರ್ಟ್ ರಾಜೀನಾಮೆ ಬಗ್ಗೆ ಒಂದು ನಿರ್ಧಾರಕ್ಕೆ ಬನ್ನಿ ಎಂದು ಸೂಚನೆ ನೀಡಿದೆ. ಹೀಗೇ ಮಾಡಿ ಎಂದು ಹೇಳಿಲ್ಲ. ಇಂದು ಇಡೀ ದಿನದ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರಿಕರಣ ಮಾಡಿಸಿದ್ದೇನೆ. ಎಲ್ಲವನ್ನೂ ನಾಳೆ ಸುಪ್ರೀಂಕೋರ್ಟ್ನ ಸಾಲಿಸಿಟರ್ ಜನರಲ್ ಅವರಿಗೆ ಕಳುಹಿಸಿಕೊಡುತ್ತೇನೆ ಎಂದು ಹೇಳಿದರು.
ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಪ್ರೆಸ್ಮಿಟ್ ಮಾಡುತ್ತಾರೆ. ಅಲ್ಲಿಂದ ದೆಹಲಿಯ ಸುಪ್ರೀಂಕೋರ್ಟ್ ಮೋರೆ ಹೋಗುತ್ತಾರೆ. ಇಂದು ನನ್ನ ಬಳಿ ಬಂದವರು ನಾವು ರಾಜೀನಾಮೆ ನೀಡುವ ದಿನ ಕೆಲವು ಘಟನೆಗಳು ನಮ್ಮಲ್ಲಿ ಭಯ ಉಂಟು ಮಾಡಿದವು ಹಾಗಾಗಿ ಮುಂಬೈಗೆ ತೆರೆಳಿದ್ದೇವು ಎಂದು ಹೇಳಿದ್ದಾರೆ. ರಕ್ಷಣೆ ಬೇಕಿದ್ದರೆ ನನ್ನಗೆ ಹೇಳಬಹುದಿತ್ತು, ನಾನೇ ರಕ್ಷಣೆ ಕೊಡಿಸುತ್ತಿದೆ ಎಂದು ಹೇಳಿದರು.
ರಾಜೀನಾಮೆ ನೀಡಿರುವ ಶಾಸಕರಿಗೆ ನಾನು ಕೆಲ ಪ್ರಶ್ನೆಗಳನ್ನು ಕೇಳಿದ್ದೇನೆ. ಅವಕ್ಕೆ ಅವರು ಉತ್ತರ ನೀಡಲಿ, ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದೇನೆ, ನಾಳೆಯಿಂದ ವಿಚಾರಣೆ ಆರಂಭವಾಗಲಿದೆ. ಕೆಲ ರಾಜ್ಯಗಳಲ್ಲಿ ಶಾಸಕರ ರಾಜೀನಾಮೆ ಪತ್ರಗಳನ್ನು ವರ್ಷಗಟ್ಟಲೆ ಮುಟ್ಟುವುದೇ ಇಲ್ಲ. ಇಲ್ಲಿ ಮೂರು ದಿನಕ್ಕೆ ಭೂಕಂಪವಾದ ರೀತಿ ಆಡುತ್ತಿದ್ದಾರೆ ಎಂದು ಸ್ಪೀಕರ್ ಆಕ್ರೋಶ ವ್ಯಕ್ತ ಪಡಿಸಿದರು.
ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಕುರಿತು ಸಂಸತ್ನಲ್ಲಿ ಚರ್ಚೆ ನಡೆಯುವ ವೇಳೆ ಪ್ರೊ. ಮಧುದಂಡವತೆ ಪಕ್ಷಾಂತರವನ್ನು ರಾಷ್ಟ್ರೀಯ ಪಿಡುಗು ಎಂದು ವ್ಯಾಖ್ಯಾನಿಸಿದರು. ೧೯೭೧ರಿಂದ ೧೯೮೧ರ ನಡುವೆ ಸಾವಿರಾರು ಪಕ್ಷಾಂತರಗಳು ನಡೆದವು. ಸಚಿವ ಸ್ಥಾನಕ್ಕಾಗಿ ೧೬೫ ಮಂದಿ ಸಂಸದರು ಪಕ್ಷಾಂತರ ಮಾಡಿದರು. ಅಧಿಕೃತವಾಗಿ ಸುಮಾರು ೪೦೦ ಪ್ರಕರಣಗಳು ವರದಿಯಾದವು. ರಾಜೀವ್ ಗಾಂಧಿ ಪ್ರಧಾನಿಯಾದಾಗ ಕಾಯ್ದೆ ಜಾರಿಗೆ ತರಲಾಯಿತು. ಆ ಕಾಯ್ದೆ ಜಾರಿಯಲ್ಲಿದೆ ಎಂದು ಮಾರ್ಮಿಕವಾಗಿ ಹೇಳಿದರು