ಬೆಂಗಳೂರು, ಜು.11- ಕಾಂಗ್ರೆಸ್ನ ಶಾಸಕರು ಒಬ್ಬರ ಹಿಂದೆ ಮತ್ತೊಬ್ಬರು ಎಂಬಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ನಡೆಸಿದ ಹರಸಾಹಸಗಳು ಫಲ ನೀಡಿಲ್ಲ. ಆದರೂ ಪರಿಸ್ಥಿತಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡುವ ತಂತ್ರಕ್ಕೆ ಜೆಡಿಎಸ್ ಶರಣಾಗಿದೆ.
ರಾಜೀನಾಮೆ ನೀಡಿರುವ ಉಭಯ ಪಕ್ಷಗಳ ಶಾಸಕರ ಮನವೊಲಿಸುವ ಪ್ರಯತ್ನ ನಿನ್ನೆ ಫಲ ನೀಡಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಶಾಸಕರ ರಾಜೀನಾಮೆ ಮುಂದುವರಿದಿದೆ. ಈ ನಡುವೆ ಕಳೆದ ಮೂರು ದಿನಗಳಿಂದ ದೇವನಹಳ್ಳಿ ಬಳಿಯ ರೆಸಾರ್ಟ್ನಲ್ಲಿ ಬೀಡುಬಿಟ್ಟಿರುವ ಜೆಡಿಎಸ್ ಶಾಸಕರು ನಾಳೆವರೆಗೂ ಅಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆಗಳಿವೆ. ನಾಳಿನ ಅಧಿವೇಶನಕ್ಕೆ ರೆಸಾರ್ಟ್ನಿಂದಲೇ ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ.
ಅತೃಪ್ತ ಶಾಸಕರು ತಮ್ಮ ರಾಜೀನಾಮೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂಕೋರ್ಟ್ನಿಂದ ಯಾವ ತೀರ್ಪು ಹೊರಬೀಳಬಹುದು ಎಂಬುದನ್ನು ಕಾದು ನೋಡಲಾಗುತ್ತಿದೆ. ಆನಂತರ ಯಾವ ಸ್ವರೂಪದ ಕಾರ್ಯತಂತ್ರ ನಡೆಸಬೇಕೆಂಬ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸುಪ್ರೀಂಕೋರ್ಟ್ನ ತೀರ್ಪು ಆಡಳಿತ ಪಕ್ಷಕ್ಕೆ ಮಾರಕವಾಗದಿದ್ದರೆ ಸರ್ಕಾರ ಉಳಿಸಿಕೊಳ್ಳುವ ಸರ್ಕಸ್ ಮುಂದುವರಿಸುವ ಸಾಧ್ಯತೆಗಳಿವೆ. ಒಂದು ವೇಳೆ ಪ್ರತಿಕೂಲವಾದರೆ ಸರ್ಕಾರಕ್ಕಿಂತ ಮುಖ್ಯವಾಗಿ ಪಕ್ಷ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಎಸ್ನ ಮೂರು ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ಮತ್ತಷ್ಟು ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಬಾರದು.ದಿನಕ್ಕೊಂದು ತಿರುವು ಪಡೆಯುತ್ತಿರುವ ರಾಜಕೀಯ ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೈತ್ರಿ ಸರ್ಕಾರದ ಸಂಕಷ್ಟ ಸ್ಪಷ್ಟರೂಪ ಪಡೆಯುವವರೆಗೂ ಜೆಡಿಎಸ್ ಶಾಸಕರು ಒಗ್ಗಟ್ಟಿನಿಂದಿರಬೇಕು ಎಂಬ ಉದ್ದೇಶದಿಂದ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದಾರೆ.