ನಾಳೆಯಿಂದ ಅಧಿವೇಶನ ಆರಂಭ-ಹೆಚ್ಚು ಪ್ರಸ್ತಾಪವಾಗಲಿರುವ ರಾಜಕೀಯ ವಿಚಾರ

ಬೆಂಗಳೂರು, ಜು.11- ಆಡಳಿತ ಪಕ್ಷದ ಶಾಸಕರ ಸರಣಿ ರಾಜೀನಾಮೆ ನಡುವೆ ನಾಳೆಯಿಂದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದ್ದು, ರಾಜ್ಯದ ಜ್ವಲಂತ ಸಮಸ್ಯೆಗಳಿಗಿಂತ ರಾಜಕೀಯ ವಿಚಾರವೇ ಹೆಚ್ಚು ಪ್ರಸ್ತಾಪವಾಗುವ ಸಾಧ್ಯತೆಗಳಿವೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತ ಪಕ್ಷದ ಶಾಸಕರ ರಾಜೀನಾಮೆಯಿಂದಾಗಿ ಬಹುಮತ ಕಳೆದುಕೊಂಡಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಈಗಾಗಲೇ ಪಟ್ಟುಹಿಡಿದು ಹೋರಾಟ ಮುಂದುವರಿಸಿದೆ.

ದಿನದಿಂದ ದಿನಕ್ಕೆ ಮೈತ್ರಿ ಸರ್ಕಾರದ ಸಂಕಷ್ಟ ಹೆಚ್ಚಾಗುತ್ತಿದ್ದು, ಸರ್ಕಾರವನ್ನು ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ನಾಯಕರು ನಿರಂತರ ಹರಸಾಹಸ ಮಾಡುತ್ತಿದ್ದಾರೆ.
ಒಂದೆಡೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆದಿದ್ದರೆ, ಮತ್ತೊಂದೆಡೆ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕಾನೂನು ಹೋರಾಟಕ್ಕೆ ಆಡಳಿತ ಪಕ್ಷ ಮುಂದಾಗಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ನಾಳೆಯಿಂದ ಜುಲೈ 26ರ ವರೆಗೆ ಚಳಿಗಾಲದ ಅಧಿವೇಶನ ನಡೆಯಬೇಕಿದೆ. ಅಧಿವೇಶನಕ್ಕೆ ವಿಧಾನಸಭೆ ಮತ್ತು ವಿಧಾನ ಪರಿಷತ್‍ನ ಸಚಿವಾಲಯಗಳು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿವೆ. ಉಭಯ ಸದನಗಳ ಸದಸ್ಯರು ತಮ್ಮ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಈಗಾಗಲೇ ಸಲ್ಲಿಸಿದ್ದಾರೆ.ಬಜೆಟ್‍ನ ಮುಂದುವರಿದ ಅಧಿವೇಶನ ಇದಾಗಿದ್ದು, ಜುಲೈ ಅಂತ್ಯದೊಳಗೆ ಪೂರ್ಣ ಪ್ರಮಾಣದ ಬಜೆಟ್‍ಗೆ ಅನುಮೋದನೆ ಪಡೆಯಬೇಕಾದ ಅನಿವಾರ್ಯತೆ ಇದೆ.

ಕಳೆದ ಅಧಿವೇಶನದಲ್ಲಿ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸಿದ್ದರು.ಜುಲೈ ಅಂತ್ಯದವರೆಗೆ ಲೇಖಾನುದಾನಕ್ಕೆ ಮಾತ್ರ ಉಭಯ ಸದನಗಳು ಒಪ್ಪಿಗೆ ನೀಡಿದ್ದವು.ಈ ಅಧಿವೇಶನದಲ್ಲಿ ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ನಡೆದು ಬಜೆಟ್ ಉಭಯ ಸದನಗಳಲ್ಲಿ ಅನುಮೋದನೆಯಾಗಬೇಕಿದೆ.

ಈ ನಡುವೆ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ನಿರಂತರವಾಗಿ ರಾಜೀನಾಮೆ ನೀಡುತ್ತಿದ್ದಾರೆ.ಸರ್ಕಾರವನ್ನು ಉಳಿಸಿಕೊಳ್ಳಲು ಎಲ್ಲ ಸಚಿವರ ರಾಜೀನಾಮೆ ಪಡೆದು ಸಂಪುಟ ಪುನಾರಚನೆ ಮಾಡುವುದಾಗಿ ಪ್ರಕಟಿಸಿದ್ದಾರೆ.ಸಂಪುಟ ಪುನಾರಚನೆ ಸಂದರ್ಭದಲ್ಲಿ ಅತೃಪ್ತ ಶಾಸಕರಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರೂ ರಾಜೀನಾಮೆ ನೀಡಿರುವ ಯಾವ ಶಾಸಕರೂ ಮಣಿಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾಳೆ ಮಧ್ಯಾಹ್ನ ಅಧಿವೇಶನ ಆರಂಭವಾಗಲಿದೆ.

ಶಾಸಕರ ರಾಜೀನಾಮೆ ವಿಚಾರ ಉಭಯ ಸದನಗಳಲ್ಲಿ ಪ್ರತಿಧ್ವನಿಸುವ ಸಾಧ್ಯತೆಯೇ ಹೆಚ್ಚಾಗಿದೆ.ಇದಲ್ಲದೆ, ರಾಜ್ಯ ಸತತ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಈ ಬಾರಿಯ ಮುಂಗಾರು ಆರಂಭದಲ್ಲೇ ವಿಫಲವಾಗಿದ್ದು, ರಾಜ್ಯದ ಬಹುತೇಕ ಭಾಗ ಮಳೆಕೊರತೆ ಎದುರಿಸುತ್ತಿದೆ.ಕೃಷಿ ಚಟುವಟಿಕೆ ಕುಂಠಿತಗೊಂಡಿದೆ.
ಕುಡಿಯುವ ನೀರು, ಜಾನುವಾರುಗಳ ಮೇವು, ಜನರು ಗುಳೆ ಹೋಗದಂತೆ ಉದ್ಯೋಗ, ಬರ ನಿರ್ವಹಣೆ ಸೇರಿದಂತೆ ಹತ್ತು-ಹಲವು ಜ್ವಲಂತ ಸಮಸ್ಯೆಗಳು ಅಧಿವೇಶನದಲ್ಲಿ ಪ್ರಸ್ತಾಪವಾಗಿ ಸರ್ಕಾರದಿಂದ ಸಮರ್ಪಕ ಉತ್ತರ ಪಡೆಯಬೇಕಾಗಿದೆ.

ಸಂಕಷ್ಟದಲ್ಲಿರುವ ಮೈತ್ರಿ ಸರ್ಕಾರ ನಾಳೆವರೆಗೂ ಇರುತ್ತೋ ಇಲ್ಲವೋ ಎಂಬ ಅನುಮಾನ ದಟ್ಟವಾಗಿದೆ.ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದರೆ ನಾಳೆ ಅಧಿವೇಶನ ಆರಂಭವಾಗುವುದಿಲ್ಲ. ರಾಜೀನಾಮೆ ನೀಡದಿದ್ದರೆ ನಾಳೆ ಅಧಿವೇಶನ ಆರಂಭವಾಗಲಿದೆ.
ಈಗಾಗಲೇ ಪ್ರತಿಪಕ್ಷ ಬಿಜೆಪಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಆರೋಪ ಮಾಡುತ್ತಿದೆ. ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಪ್ರತ್ಯಾರೋಪ ಮಾಡುತ್ತಿದ್ದು, ಇದು ನಾಳಿನ ಅಧಿವೇಶನದಂದು ಪ್ರತಿಧ್ವನಿಸುವ ಸಾಧ್ಯತೆಗಳೇ ಇವೆ. ಅಧಿವೇಶನ ನಡೆಸಲು ಎಲ್ಲ ರೀತಿಯ ಸಿದ್ಧತೆ ನಡೆಸಿದ್ದರೂ ಸರ್ಕಾರದ ಇಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಇನ್ನೂ ಅಧಿವೇಶನ ನಡೆಯುವುದು ಅನಿಶ್ಚಿತತೆಯಿಂದ ಕೂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ